ಬೆಂಗಳೂರು, ಜು.15- ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಉಚಿತವಾಗಿ ಅರ್ಹರಿಗೆ ಕೋವಿಡ್ ಬೂಸ್ಟರ್ ಮುನ್ನೆಚ್ಚರಿಕೆ ಲಸಿಕೆಯನ್ನುಪರಿಣಾಮಕಾರಿಯಾಗಿ ರಾಜ್ಯದಲ್ಲೂ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ಸೂಕ್ಷ್ಮಕ್ರಿಯಾ ಯೋಜನೆಯನ್ನು ಸರ್ಕಾರ ರೂಪಿಸಿದೆ.
ರಾಜ್ಯದಲ್ಲಿ ಅರ್ಹರಿಗೆ ಉಚಿತವಾಗಿ ಬೂಸ್ಟರ್ ಡೋಸ್‍ಗಳನ್ನು ನೀಡುವ ಕುರಿತಾಗಿ ಮನೆ ಮನೆಗೆ ಲಸಿಕಾ ಮಿತ್ರ, ಬುಧವಾರದ ಲಸಿಕಾ ಮೇಳದ ಜೊತೆಗೆ ಐಟಿ ಕಂಪನಿ, ಕಾರ್ಖಾನೆ, ಸರ್ಕಾರಿ ಕಛೇರಿಗಳಲ್ಲಿ ಸ್ಥಳದಲ್ಲೇ ಲಸಿಕೆ ನೀಡುವ ಜಿಲ್ಲಾಮಟ್ಟದ ಸೂಕ್ಷ್ಮ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಎಲ್ಲ ಅರ್ಹ ನಾಗರೀಕರು ಮುನ್ನೆಚ್ಚರಿಕೆ ಡೋಸ್ ಪಡೆಯುವ ಮೂಲಕ ಕೊರೊನಾ ಮುಕ್ತ ಕರ್ನಾಟಕ ನಿರ್ಮಿಸಲು ಕೈಜೋಡಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಟ್ವಿಟರ್‍ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಾದ್ಯಂತ 75 ದಿನಗಳ ವಿಶೇಷ ಕೋವಿಡ್ ಲಸಿಕಾ ಅಮೃತ ಮಹೋತ್ಸವ ಅಭಿಯಾನ ಇಂದಿನಿಂದ ಆರಂಭವಾಗಿದ್ದು, 2ನೇ ಡೋಸ್ ಪಡೆದುಕೊಂಡ ನಂತರ 6 ತಿಂಗಳು ಅಥವಾ 26 ವಾರ ಪೂರ್ಣಗೊಳಿಸಿರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಇಂದಿನಿಂದ ಸೆಪ್ಟೆಂರ್ಬ 30ರವರೆಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು ಎಂದು ಹೇಳಿದ್ದಾರೆ.
ಮುಂದಿನ 75 ದಿನಗಳಲ್ಲಿ ಕರ್ನಾಟಕದಾದ್ಯಂತ 8,000 ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಸುಮಾರು 4.34 ಕೋಟಿ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ವಿತರಿಸುವ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ 8.84 ಲಕ್ಷ ಡೋಸ್ ಕೋವಿಶೀಲ್ಡ ಹಾಗೂ 31.55 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕಾ ದಾಸ್ತಾನಿದೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಅಭಿಯಾನವನ್ನು ಸಾಕಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಮೊದಲು ಕರ್ನಾಟಕ 1 ಮತ್ತು 2ನೇ ಹಂತದ ಕೋವಿಡ್ ಲಸಿಕೆ ನೀಡುವಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಸಾಕಷ್ಟು ಮುಂಚೂಣಿಯಲ್ಲಿದ್ದೇವೆ. ನಮ್ಮ ಸರ್ಕಾರದ ಈ ಕಾರ್ಯಕ್ಕೆ ಖುದ್ದು ಪ್ರಧಾನಿ ನರೇಂದ್ರಮೋದಿ ಅವರೇ ಶ್ಲಾಘಿಸಿದ್ದಾರೆ.
ಈಗ 3ನೇ ಹಂತದ ಬೂಸ್ಟರ್ ಡೋಸ್ ಅಭಿಯಾನಕ್ಕೆ ಕೋವಿಡ್ ವಾರಿರ್ಯರ್ಸ್‍ಗಳನ್ನು ಬಳಸಿಕೊಳ್ಳಬೇಕು. ಕುಗ್ರಾಮದಿಂದ ಹಿಡಿದು ರಾಜಧಾನಿಯವರೆಗೂ ಅತ್ಯಂತ ಯಶಸ್ವಿಯಾಗಿ ನಡೆಯಬೇಕು. ಸರ್ಕಾರ ಇದಕ್ಕೆ ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಕೋವಿಡ್ ಮುನ್ನೆಚ್ಚರಿಕೆ ಡೋಸ್ ಅನ್ನು ಹೆಚ್ಚು ಜನರಿಗೆ ನೀಡುವ ಗುರಿಯನ್ನು ಹೊಂದಿರುವ ಈ ಅಭಿಯಾನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ನಡೆಯಲಿದೆ. ಇಲ್ಲಿಯವರೆಗೆ 18 ರಿಂದ 59 ವಯೋಮಾನದ 77 ಕೋಟಿ ಜನಸಂಖ್ಯೆಯಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಜನರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ.
ಭಾರತೀಯ ಜನಸಂಖ್ಯೆಯ ಬಹುಪಾಲು ಜನರು ಒಂಬತ್ತು ತಿಂಗಳ ಹಿಂದೆಯೇ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಮತ್ತು ಇತರ ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳ ಅಧ್ಯಯನಗಳು, ಲಸಿಕೆ ಪಡೆದ ಆರು ತಿಂಗಳ ನಂತರ ಪ್ರತಿಕಾಯ ಮಟ್ಟಗಳು ಕ್ಷೀಣಿಸುತ್ತವೆ ಎಂದು ಹೇಳಿವೆ. ಹೀಗಾಗಿ ಕೊರೋನಾದಿಂದ ಮತ್ತಷ್ಟು ರಕ್ಷಣೆ ಪಡೆಯಲು ಬೂಸ್ಟರ್ ಡೋಸ್ ನೀಡಲಾಗುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಎಲ್ಲಾ ಫಲಾನುಭವಿಗಳಿಗೆ ಕೋವಿಡ್-19 ಲಸಿಕೆಯ ಎರಡನೇ ಮತ್ತು ಮುನ್ನೆಚ್ಚರಿಕೆಯ ಡೋಸ್ ನಡುವಿನ ಅಂತರವನ್ನು ಒಂಬತ್ತರಿಂದ ಆರು ತಿಂಗಳವರೆಗೆ ಕಡಿಮೆ ಮಾಡಿದೆ. ಇದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‍ಟಿಎಜಿಐ) ಶಿಫಾರಸನ್ನು ಅನುಸರಿಸಿದೆ.
ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲು ಮತ್ತು ಬೂಸ್ಟರ್ ಶಾಟ್‍ಗಳನ್ನು ಉತ್ತೇಜಿಸಲು ಸರ್ಕಾರವು ಜೂನ್ 1 ರಂದು ರಾಜ್ಯಗಳಾದ್ಯಂತ ¾ಹರ್ ಘರ್ ದಸ್ತಕ್ ಅಭಿಯಾನ 2.0ನ ಎರಡನೇ ಸುತ್ತನ್ನು ಪ್ರಾರಂಭಿಸಿತು. ಎರಡು ತಿಂಗಳ ಕಾರ್ಯಕ್ರಮವು ಪ್ರಸ್ತುತ ನಡೆಯುತ್ತಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ 96 ಪ್ರತಿಶತದಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ. ಶೇಕಡಾ 87ರಷ್ಟು ಜನ ಎರಡೂ ಡೋಸ್‍ಗಳನ್ನು ತೆಗೆದುಕೊಂಡಿದ್ದಾರೆ.