ಮಹಾರಾಷ್ಟ್ರ ಸಚಿವರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ

Social Share

ಬೆಂಗಳೂರು,ಡಿ.5- ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದ ತೀವ್ರ ಸಂಘರ್ಷ ಉಂಟು ಮಾಡುತ್ತಿರುವ ಹಿನ್ನಲೆಯಲ್ಲಿ ನಾಳೆ ಅಲ್ಲಿನ ಸಚಿವರ ಭೇಟಿಗೆ ಪ್ರತಿಬಂಧಕಾಜ್ಞೆ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ನಾಳೆ ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಭುರಾಜ್ ದೇಸಾಯಿ ಅವರು ಬೆಳಗಾವಿಗೆ ಭೇಟಿ ಕೊಟ್ಟು ಎಂಇಎಸ್ ನಾಯಕರ ಜೊತೆ ಗಡಿವಿವಾದ ಕುರಿತು ಚರ್ಚೆ ನಡೆಸಲಿದ್ದಾರೆ.

ಆದರೆ ಸಚಿವರ ಆಗಮನಕ್ಕೆ ಕನ್ನಡಪರ ಸಂಘಟನೆಗಳು ಹಾಗೂ ಸಾಹಿತಿಗಳು ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಕಾರಣ, ಭೇಟಿಗೆ ಅವಕಾಶ ಕೊಡದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಬೊಮ್ಮಾಯಿ, ಈಗಿನ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಆಗಮಿಸುವುದು ಬೇಡ, ಉಭಯ ರಾಜ್ಯಗಳ ನಡುವೆ ಸಾಮರಸ್ಯವಿದೆ. ಇದನ್ನು ಹಾಳು ಮಾಡುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಪೇಕ್ಷೆ : ಶಾಸಕ ಜಮೀರ್

ಒಂದು ವೇಳೆ ಸಚಿವರೇನಾದರೂ ಕರ್ನಾಟಕಕ್ಕೆ ಬಂದರೆ ಅವರನ್ನು ಗಡಿ ಭಾಗದಲ್ಲೇ ತಡೆದು ವಾಪಸ್ ಕಳುಹಿಸುವಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಿಎಂ ಸೂಚನೆ ನೀಡಿದ್ದಾರೆ.

ಅಕಸ್ಮಾತ್ ಬರುವ ಸಾಹಸ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ನಮ್ಮ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಗೆ ಈ ಇಬ್ಬರು ಸಚಿವರು ಬಂದರೆ ಪರಿಸ್ಥಿತಿ ಏನು ಬೇಕಾದರೂ ಆಗಬಹುದು. ಕೆಲವು ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಸರ್ಕಾರಕ್ಕೆ ಮಾಹಿತಿ ನೀಡಿದೆ.

ಮಹಾರಾಷ್ಟ್ರ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಕೆಣಕುವ ಯತ್ನ ಮಾಡಿದರೆ ಪರಿಸ್ಥಿತಿ ಕೈ ಮೀರಬಹುದು. ಈ ಹಿಂದೆಯೂ ಅನೇಕ ಬಾರಿ ಅಹಿತಕರ ಘಟನೆಗಳು ನಡೆದಿವೆ. ಹೀಗಾಗಿ ಅವಕಾಶ ಕೊಡಲೇಬೇಡಿ ಎಂದು ಪೊಲೀಸರಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.

ಈಗಾಗಲೇ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದು, ಎರಡೂ ರಾಜ್ಯಗಳ ಮಧ್ಯೆ ವಿಷಮ ಪರಿಸ್ಥಿತಿ ಇದೆ. ಹೀಗಿರುವಾಗ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಯಾವುದೇ ಕಾರಣಕ್ಕೂ ಬರಬಾರದು ಎಂದಿದ್ದಾರೆ.

ಹಿಂದೆ ಹಲವಾರು ಬಾರಿ ಈ ರೀತಿ ಪ್ರಯತ್ನ ಆದಾಗ ಕರ್ನಾಟಕ ಸರಕಾರ ಏನು ಕ್ರಮ ಕೈಗೊಂಡಿದೆಯೋ ಅದೇ ಕ್ರಮವನ್ನು ಈಗಲೂ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಬೆಳಗಾವಿಗೆ ಭೇಟಿ ನೀಡುವುದರಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿ.6ರಂದು ಬೆಳಗಾವಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಅಂಬೇಡ್ಕರ್‍ವಾದಿ ಸಂಘಟನೆಯ ಆಹ್ವಾನದ ಮೇರೆಗೆ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುತ್ತೇವೆ ಎಂದು ಸಚಿವ ಚಂದ್ರಕಾಂತ ಪಾಟೀಲ ತಿಳಿಸಿದ್ದಾರೆ.

ಅಮರನಾಥಗೌಡ ಹಾಗೂ ದ್ವಾರಕೀಶ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ರಾಜ್ಯಸಭಾ ಸದಸ್ಯ, ಶಿವಸೇನೆ ವಕ್ತಾರ ಸಂಜಯ ರಾವುತ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಾರಾಷ್ಟ್ರದ ಸಚಿವರನ್ನು ಕರ್ನಾಟಕದಲ್ಲಿ ತಡೆಯಲು ಸಾಧ್ಯವಿಲ್ಲ. ಏಕನಾಥ ಶಿಂಧೆ ಸರಕಾರದ ಸಚಿವರಿಗೆ ಬೆಳಗಾವಿಗೆ ಹೋಗಲು ಆಗದಿದ್ದರೆ ಹೇಳಲಿ ನಾವೇ ಬೆಳಗಾವಿ ಭೇಟಿ ನೀಡುತ್ತೇವೆ ಎಂದಿದ್ದಾರೆ.

ಸಿಡಿದೆದ್ದ ಸಂಘಟನೆಗಳು:
ಇನ್ನು ಮಹಾರಾಷ್ಟ್ರ ಸಚಿವರು ಗಡಿ ವಿವಾದ ಇಟ್ಟುಕೊಂಡು ಬೆಳಗಾವಿಗೆ ಬರುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ತೀರ ಆಕ್ರೋಶ ವ್ಯಕ್ತಪಡಿಸಿವೆ. ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ವಾಟಾಳ್ ಪಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಹೋರಾಟ ಸಮಿತಿ ಹೀಗೆ ಹತ್ತಾರು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ಕೊಡಬಾರದು.

ಒಂದು ವೇಳೆ ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಭುರಾಜ್ ದೇಸಾಯಿ ಅವರು ಬೆಳಗಾವಿಗೆ ಬಂದರೆ ನಾವು ಕೂಡ ದೊಡ್ಡ ಹೋರಾಟ ಮಾಡಲೇಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್ ತಲುಪಿದ ಇಂಗ್ಲೆಂಡ್

ಬೆಳಗಾವಿಯಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದೆಂಬ ಆತಂಕ ಎದುರಾಗಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಕನ್ನಡಪರ ಹೋರಾಟಗಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

#Borderrow, #Maharashtra, #Ministers, #Enter, #Karnataka, #CMBommai,

Articles You Might Like

Share This Article