ಬೆಂಗಳೂರು,ಫೆ.6- ಸರ್ಕಾರಿ ಆಸ್ಪತ್ರೆಗಳೆಂದರೆ ಬೇಜವಬ್ದಾರಿಯ ಕೇಂದ್ರಗಳು ಎಂಬ ಮಾತಿಗೆ ಇಂಬು ಕೊಡುವಂತೆ ನಗರದ ಬೌರಿಂಗ್ ಆಸ್ಪತ್ರೆ ಎರಡು ದಿನಗಳಿಂದ ಕತ್ತಲ ಕೂಪವಾಗಿದ್ದರೂ ಸಂಬಂಧಪಟ್ಟವರ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ.
ಸಾವಿರಾರು ಬಡ ರೋಗಿಗಳಿರುವ ಬೌರಿಂಗ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ಕರೆಂಟ್ ಇಲ್ಲ ಹೀಗಾಗಿ ಅಲ್ಲಿನ ರೋಗಿಗಳು ಕತ್ತಲಲ್ಲೆ ಕಾಲ ಕಳೆಯುವಂತಾಗಿದೆ. ಕರೆಂಟ್ ಇಲ್ಲ ಎಂಬುದು ತಿಳಿದಿದ್ದರೂ ಸಂಬಂಧಪಟ್ಟವರು ಎರಡು ದಿನ ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದು ರೋಗಿಗಳನ್ನು ಕೆರಳಿಸಿದೆ.
ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಬೌರಿಂಗ್ ಆಸ್ಪತ್ರೆಗೆ ಬರುವವರು ಬಹುತೇಕ ರೋಗಿಗಳು ಕಡುಬಡವರೆ ಆಗಿರುತ್ತಾರೆ ಮಾತ್ರವಲ್ಲ, ನಿತ್ಯ ಹತ್ತಾರು ಗರ್ಭಿಣಿಯರು ಹೆರಿಗೆಗಾಗಿ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ.
ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ, 95 ಮಂದಿ ಸಾವು
ಬೌರಿಂಗ್ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದ ಕಾರಣ ನಿನ್ನೆ ಹೆರಿಗೆಯಾದ ತಾಯಿ-ಮಗುವನ್ನು ಸಮೀಪದ ವಾಣಿ ವಿಲಾಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಒಂದು ವೇಳೆ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಹೊರುತ್ತಿದ್ದರು ಎಂದು ಕೆಲವರು ಪ್ರಶ್ನಿಸಿದ್ದಾರೆ.
ಪ್ರಾಥಮಿಕ ಮೂಲಗಳ ಪ್ರಕಾರ ಆಸ್ಪತ್ರೆ ಮುಂಭಾಗ ವೈಯರ್ ಕಟ್ ಆಗಿದೆ ಕರೆಂಟ್ ಕಟ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೂ ಸರ್ಕಾರ ಹಾಗೂ ಆಸ್ಪತ್ರೆ ಮೇಲಾಧಿಕಾರಿಗಳು ಸಮಸ್ಯೆ ಬಗೆಹರಿಸಲು ಮೀನಾಮೇಷ ಎಣಿಸುತ್ತಿರುವುದರಿಂದ ಬಡ ರೋಗಿಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿರುವುದು ಮಾತ್ರ ವಿಪರ್ಯಾಸವೇ ಸರಿ.
Bowring, Hospital, electricity, managements,