ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದ ಬಾಕ್ಸರ್ ಅಮಿತ್

Boxer--01

ಜಕಾರ್ತ, ಸೆ.1-ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಪಟುಗಳ ಪದಕ ಬೇಟೆ ಮುಂದುವರಿದಿದೆ. ಭಾರತದ ಹೆಮ್ಮೆಯ ಬಾಕ್ಸರ್ ಅಮಿತ್ ಪಂಗಲ್ 49 ಕೆಜಿ ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಏಷ್ಯಾಡ್‍ನಲ್ಲಿ ಭಾರತ ಹೊಸ ದಾಖಲೆ ಬರೆದಂತಾಗಿದೆ.

ಇಂದು ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಹಾಲಿ ಒಲಿಂಪಿಕ್ ಮತ್ತು ಏಷ್ಯನ್ ಚಾಂಪಿಯನ್ ಉಜ್ಬೇಕಿಸ್ತಾನದ ಲೈಟ್ ಫ್ಲೈವೇಟ್ ಬಾಕ್ಸರ್ ಹಸನಬಾಯ್ ಡಸ್‍ಮಟೋವ್ ಅವರನ್ನು ಮಣಿಸಿ ಹರಿಯಾಣ ಬಾಕ್ಸರ್ ಅಮಿತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಏಷ್ಯನ್ ಕ್ರೀಡಾಕೂಟದ ಬಾಕ್ಸಿಂಗ್ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಅಚ್ಚರಿ ಮೂಡಿಸಿದ 22 ವರ್ಷದ ಯೋಧ ಅಮಿತ್, 3-2ರಿಂದ ಹಸನ್‍ಬಾಯ್ ಅವರನ್ನು ಸೋಲಿಸಿ ಚಿನ್ನ ಗೆದ್ದರು.

ಕಳೆದ ವರ್ಷ ಹಂಬರ್ಗ್‍ನಲ್ಲಿ ನಡೆದ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ವಿಭಜಿತ ಫಲಿತಾಂಶದಿಂದ ಹಸನ್‍ಬಾಯ್ ವಿರುದ್ಧ ಸೋಲು ಕಂಡಿದ್ದ ಅಮಿತ್ ಏಷ್ಯನ್ ಗೇಮ್ಸ್‍ನಲ್ಲಿ ಅವರನ್ನು ಪರಾಭವಗೊಳಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ಏಷ್ಯನ್ ಕ್ರೀಡಾಕೂಟದಲ್ಲೇ ಹಾಲಿ ಒಲಂಪಿಕ್ ಚಾಂಪಿಯನ್ ಬೆಚ್ಚಿ ಬೀಳುವಂತೆ ಪಂಚ್‍ಗಳನ್ನು ನೀಡಿದರು. ಆತ್ಯಂತ ಜಾಣ್ಮೆಯಿಂದ ಪಂದ್ಯ ಎದುರಿಸಿ ಗೆಲುವು ಸಾಧಿಸಿದ ಅಮಿತ್ ಸಾಧನೆಯಿಂದ ಭಾರತದ ಕ್ರೀಡಾಪಟುಗಳಲ್ಲಿ ಅಮಿತೋತ್ಸಾಹ ಮೂಡಿದೆ.

Sri Raghav

Admin