‘ಸಂವಿಧಾನ ದಿನ’ದ 70ನೆ ವರ್ಷಾಚರಣೆ, ಸಂಸತ್ ಜಂಟಿ ಕಲಾಪಕ್ಕೆ ವಿಪಕ್ಷಗಳ ಬಹಿಷ್ಕಾರ

ನವದೆಹಲಿ, ನ.26- ಇಂದು ಭಾರತೀಯ ಸಂವಿಧಾನ ದಿನದ 70ನೆ ವಾರ್ಷಿಕೋತ್ಸವ ಈ ಪ್ರಯುಕ್ತ ಸಂಸತ್‍ನಲ್ಲಿಂದು ವಿಶೇಷ ಕಾರ್ಯಕ್ರಮಗಳು ಆಯೋಜಿತವಾಗಿವೆ. ರಾಜ್ಯಸಭೆ ಮತ್ತು ಲೋಕಸಭೆಯ ಜಂಟಿ ವಿಶೇಷ ಅಧಿವೇಶನ ಇಂದು ನಡೆಯಿತು.

ಸೆಂಟ್ರಲ್ ಹಾಲ್‍ನಲ್ಲಿ ಏರ್ಪಾಡಾಗಿದ್ದ ಸಂವಿಧಾನ ದಿನ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕಾಂಗ್ರೆಸ್ ಮತ್ತು ಇತರೆ ಎಲ್ಲಾ ವಿರೋಧ ಪಕ್ಷಗಳು ಇಂದು ಬಹಿಷ್ಕರಿಸಿದವು. ಮಹಾರಾಷ್ಟ್ರದಲ್ಲಿ ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಿರುವುದನ್ನು ವಿರೋಧಿಸಿ ವಿಪಕ್ಷಗಳು ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಅನುಪಸ್ಥಿತರಾಗಿದ್ದರು.

ಸಂವಿಧಾನದ ದಿನದ ಅಂಗವಾಗಿ ಸಂಸತ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ವೇಳೆ ಸಂಸತ್ ಅಂಬೇಡ್ಕರ್ ಪ್ರತಿಮೆ ಬಳಿ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು ಇಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಪ್ರತಿಭಟನೆ ನಡೆಸಿದವು.

ಜಂಟಿ ಅಧಿವೇಶನ ಬಹಿಷ್ಕರಿಸುವ ಪ್ರತಿಪಕ್ಷಗಳ ನಿರ್ಧಾರವನ್ನು ಬಿಜೆಪಿ ಖಂಡಿಸಿದ್ದು, 70ನೆ ಸಂವಿಧಾನದ ದಿನದಂದೇ(ನ.26) ಜಂಟಿ ಸದನವನ್ನು ಬಹಿಷ್ಕರಿಸಲು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ತೀರ್ಮಾನಿಸಿವೆ. ಇದು ಈ ಪಕ್ಷಗಳಿಂದ ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಉಂಟಾಗುತ್ತಿರುವ ಮತ್ತೊಂದು ಅವಮಾನ ಎಂದು ಹೇಳಿದೆ.