ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

Spread the love

ಬೆಂಗಳೂರು, ಮೇ 20- ಯಾವುದೇ ಕಾರಣಕ್ಕೂ ಶಿಕ್ಷಣ ಇಲಾಖೆಯ ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಒಳಗೊಂಡ ಪಾಠವನ್ನು ಕೈ ಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಬಂದ ನಂತರ ಸ್ಪಷ್ಟನೆ ನೀಡಿದ ಸಚಿವರು, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ನಾಗೇಶ್ ಅವರನ್ನು ಈ ಕುರಿತು ಭೇಟಿಯಾಗಿ ನಾನು ಮಾತನಾಡಿದ್ದು, ಪಠ್ಯಪುಸ್ತಕದಲ್ಲಿ ನಾರಾಯಣಗುರುಗಳ ಸಂದೇಶವನ್ನು ಒಳಗೊಂಡ ಪಾಠವನ್ನು ಕೈಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಇಲಾಖೆಯ ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಒಳಗೊಂಡ ಪಾಠವನ್ನು ಕೈಬಿಟ್ಟ ಕುರಿತು ಊಹಾಪೋಹಗಳೆಗೆ ತೆರೆ ಎಳೆದಿದ್ದಾರೆ.  ರಾಜ್ಯದಾದ್ಯಂತ ಇರುವ ಈಡಿಗ, ಬಿಲ್ಲವ ಸಮುದಾಯ ಸೇರಿದಂತೆ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಸಚಿವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Facebook Comments