ಅಲ್ಪಸಂಖ್ಯಾತರ ಪ್ರಭಾವಿ ಮುಖಂಡ, ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನ
ಬೆಂಗಳೂರು,ಸೆ.18-ಮಾಜಿ ಸಚಿವ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖಂಡ, ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಹಾಲಿ ಅಧ್ಯಕ್ಷ ಶಾಸಕ ಖಮರುಲ್ ಇಸ್ಲಾಂ(69) ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ದತ್ತು ಮಗ, ಸಂಬಂಧಿಕರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಹಿತೈಷಿಗಳನ್ನು ಬಿಟ್ಟು ಅಗಲಿದ್ದಾರೆ. ಕಳೆದ ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಖಮುರಲ್ ಇಸ್ಲಾಂ ಅವರನ್ನು ನಗರದ ನಾರಾಯಣ ಹೃದಾಲಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಬೆಳಗ್ಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ತಕ್ಷಣವೇ ನಾರಾಯಣ ಹೃದಾಲಯದ ತಜ್ಞ ವೈದ್ಯರಾದ ಡಾ.ಶಿವಪ್ರಸಾದ್ ಮತ್ತು ಅವರ ತಂಡ ಚಿಕಿತ್ಸೆ ನೀಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ತೀವ್ರ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ನಾಳೆ ಗುಲ್ಬರ್ಗಾ ಜಿಲ್ಲೆಯ ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಜಕೀಯ ಹಿನ್ನೆಲೆ:
1948 ಜನವರಿ 27ರಂದು ಜನಿಸಿದ್ದ ಖಮರುಲ್ಲಾ ಇಸ್ಲಾಂ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖಂಡರು. 6ಬಾರಿ ಶಾಸಕರು ಹಾಗೂ ಒಂದು ಬಾರಿ ಸಂಸದರು ಮತ್ತು ವಿವಿಧ ಸಮಿತಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1978ರಲ್ಲಿ ಮುಸ್ಲಿಂ ಲೀಗ್ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ ಇಸ್ಲಾಂ ಇದೇ ಪಕ್ಷದಿಂದ ಎರಡು ಬಾರಿ, ಜೆಡಿಎಸ್ನಿಂದ ಒಂದು ಬಾರಿ ಹಾಗೂ ಕಾಂಗ್ರೆಸ್ನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲ್ ಅವಧಿಯಲ್ಲಿ ಕಾರ್ಮಿಕ, ಎಸ್.ಎಂ.ಕೃಷ್ಣ ಅವರ ಅಧಿಕಾರಾವಧಿಯಲ್ಲಿ ವಸತಿ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯನವರ ಸಂಪುಟದಲ್ಲಿ ಪೌರಾಡಳಿತ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿದ್ದ ಅವರನ್ನು ಕಳೆದ ಬಾರಿ ನಡೆದ ಸಚಿವ ಸಂಪುಟ ಪುನಾರಚನೆಯಲ್ಲಿ ಕೈಬಿಡಲಾಗಿತ್ತು.
ಮುಸ್ಲಿಂ ಲೀಗ್ ನಂತರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಅವರು ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಧರ್ಮಸಿಂಗ್ ಅವರ ಜೊತೆ ಗುರುತಿಸಿಕೊಂಡ ಖಮರುಲ್ಲಾ ಇಸ್ಲಾಂ ನಿರಂತರವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಲೇ ಬಂದರು.
1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಗುಲ್ಬರ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಳಿಕ 2004, 2008, 2013ರ ವಿಧಾನಸಭೆ ಚುನಾವಣೆ ಸೇರಿದಂತೆ ಒಟ್ಟು 6 ಬಾರಿ ವಿಧಾನಸಭೆ ಪ್ರವೇಶಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಪಸಂಖ್ಯಾತ ಸಮುದಾಯದ ಮೇಲೆ ಇಟ್ಟುಕೊಂಡಿದ್ದ ವಿಶೇಷ ಕಾಳಜಿ ಗುರುತಿಸಿ ಎಸ್.ಎಂ.ಕೃಷ್ಣ ಅವರನ್ನು ಮೊದಲ ಬಾರಿಗೆ ಸಂಪುಟಕ್ಕೆ ತೆಗೆದುಕೊಂಡಿದ್ದರು. ಕ್ಷೇತ್ರ ಪುನರ್ವಿಂಗಡನೆ ನಂತರ ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಶಿಕ್ಷಣದ ಹರಿಕಾರ:
ಸಮುದಾಯದ ಏಳಿಗೆಗಾಗಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಹಜರತ್ ಶೇಕ್-ಮಿನ್-ಹಜಾವುದ್ದೀನ್, ಅನ್ಸಾರಿ, ಕಲ್ಲೇರವನ್ ಚಾರಿಟಬಲ್ ಟ್ರಸ್ಟ್ ಮೂಲಕ ಕೆಸಿಟಿ ಇಂಜಿನಿಯರಿಂಗ್ ಪಾಲಿಟೆಕ್ನಿಕ್ ಕಾಲೇಜು, ಗುಲ್ಬರ್ಗ, ಹೈದರಾಬಾದ್ ಕರ್ನಾಟಕ ಉರ್ದು ಫ್ರಂಟ್, ಮೀರಜ್ನೂರ್ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಬಿ.ಎಎಡ್, ಡಿ.ಫಾರ್ಮ, ಬಿ.ಫಾರ್ಮ, ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡಿದ್ದರು. 1979-82, 1992-93ರಲ್ಲಿ ಸಾರ್ವಜನಿಕ ಲೆಕ್ಕ ಸಮಿತಿ, 1990-92ರಲ್ಲಿ ಯೋಜನಾ ವೆಚ್ಚ ಸಮಿತಿ, 1994-96ರಲ್ಲಿ ವಸತಿ ನಗರಾಭಿವೃದ್ದಿ ಸಮಿತಿ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಕಾಂಗ್ರೆಸ್ನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಂಪುಟದಿಂದ ಕೈಬಿಟ್ಟ ವೇಳೆ ಸಿಡಿದೆದ್ದ ಅವರು ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದರು. ಅಸಮಾಧಾನ ಹೋಗಲಾಡಿಸಲು ಮುಖ್ಯಮಂತ್ರಿ ಅವರನ್ನು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.
ಸಂತಾಪ:
ಮಾಜಿ ಸಚಿವ ಖಮರುಲ್ಲ ಇಸ್ಲಾಂ ಅವರ ನಿಧನಕ್ಕೆ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ , ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ಅನಂತ್ಕುಮಾರ್, ಡಿ.ವಿ.ಸದಾನಂದಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಸಚಿವರಾದ ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ , ಯು.ಟಿ.ಖಾದರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.