ಬೆಂಗಳೂರು/ಕೋಲಾರ.ಫೆ.12- ಈ ನವವಧುವಿನ ಬಾಳಲ್ಲಿ ವಿಧಿ ಚೆಲ್ಲಾಟವಾಡಿದೆ. ಮದುವೆಯ ಆರತಕ್ಷತೆ ವೇಳೆಯೇ ಕುಸಿದು ಬಿದ್ದ ನವವಧುವಿನ ಬ್ರೈನ್ ಡೆಡ್ ಆಗಿದೆ. ಸಹಸ್ರಾರು ಕನಸುಗಳನ್ನು ಹೊತ್ತು ಇನ್ನೇನು ಸಪ್ತಪದಿ ತುಳಿಯಬೇಕು ಎನ್ನುವಷ್ಟರಲ್ಲಿ ಈಕೆಯ ಜೀವನವೇ ಮುಗಿದು ಹೋಗಿದೆ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕೊಡಚೆರವು ಗ್ರಾಮದ ಚೈತ್ರಾ ರಾಮಪ್ಪನವರ ಮಗಳು. ಎಂಎಸ್ಸಿ ಬಯೋ ಕೆಮಿಸ್ಟ್ರಿ ಮಾಡಿ ಕೈವಾರದ ಬಳಿ ಕಾಲೇಜುವೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
ಹೊಸಕೋಟೆ ಮೂಲದ ಯುವಕನೊಂದಿಗೆ ಇವರ ಮದುವೆ ನಿಶ್ಚಯವಾಗಿತ್ತು. ಫೆ.6ರಂದು ಇವರ ವಿವಾಹ ಆರತಕ್ಷತೆಯನ್ನು ಶ್ರೀನಿವಾಸಪುರ ಪಟ್ಟಣದಲ್ಲಿ ಏರ್ಪಾಡಾಗಿತ್ತು. ಸಂಬಂಧಗಳು, ಸ್ನೇಹಿತರು, ಬಂಧುಬಳಗದವರೆಲ್ಲ ಆರತಕ್ಷತೆಗೆ ಆಗಮಿಸಿ ನೂತನ ದಂಪತಿಗಳಿಗೆ ಆಶೀರ್ವದಿಸಿ ಎಲ್ಲ ಪೋಟೋ ತೆಗೆಸಿಕೊಂಡಿದ್ದರು. ಆದರೆ ಒಂದೇ ಕ್ಷಣದಲ್ಲಿ ಎಲ್ಲ ಆಸೆಗಳು ನುಚ್ಚು ನೂರಾಗಿದೆ.
ಏನಾಯಿತು ಎಂದು ತಿಳಿಯುವುಷ್ಟರಲ್ಲೇ ವಧು ಚೈತ್ರಾ ಹಠಾತ್ ಆಗಿ ಕುಸಿದುಬಿದ್ದರು. ಕೂಡಲೇ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ನೀಡಿದ ಹೇಳಿಕೆ ಪೋಷಕರಿಗೆ ಶಾಕ್ ನೀಡಿತು.ನಿಮ್ಮ ಮಗಳು ಚೈತ್ರಾಳ ಮೆದುಳು ನಿಷ್ಕ್ರಿಯವಾಗಿದೆ(ಬ್ರೈನ್ ಡೆಡ್) ಆಕೆ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತು. ಈ ದುಃಖದ ನಡುವೆಯೂ ಪೋಷಕರು ದಿಟ್ಟ ನಿರ್ಧಾರವನ್ನು ಕೈಗೊಂಡರು.
ತಮ್ಮ ಮಗಳು ಚೈತ್ರಾಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಬಹು ಕನಸುಗಳನ್ನು ಕಟ್ಟಿಕೊಂಡು ಮಗಳನ್ನು ಸಾಕಿ ಸಲುಹಿದ್ದೆವು. ಅದ್ಧೂರಿಯಾಗಿ ಮದುವೆ ಕೂಡ ಆಯೋಜಿಸಿದ್ದೆವು. ಆದರೆ ನಮ್ಮ ಪಾಲಿಗೆ ಅದ್ಯಾವುದು ದಕ್ಕಲಿಲ್ಲ. ಈಗ ನಮ್ಮ ಮಗಳು ಇಲ್ಲ. ಆಕೆಯ ಅಂಗಾಂಗಳಾದರೂ ಬೇರೆಯವರಿಗೆ ಉಪಯೋಗಕ್ಕೆ ಬರಲಿ. ಬೇರೆಯವರ ಬಾಳಿಗೆ ಬೆಳಕಾಗಲಿ ಎಂಬ ಉದಾತ್ತ ಆದರ್ಶವನ್ನು ತಾಳಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ನಿಮ್ಹಾನ್ಸ್‍ನಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಮುಗಿದ ನಂತರ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯದ ಪೋಷಕರು ಅಂತ್ಯಕ್ರಿಯೆ ನೆರವೇರಿಸಿದರು. ಈ ಮಾಹಿತಿ ತಿಳಿಯುತ್ತಿದ್ದಂತೆ ತಮ್ಮ ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್, 26 ವರ್ಷದ ಚೈತ್ರಾಳಿಗೆ ಮದುವೆ ದಿನ ಬಹು ದೊಡ್ಡ ದಿನವಾಗಿತ್ತು. ಆದರೆ ವಿಧಿಯ ಯೋಜನೆ ಬೇರೆಯಿತ್ತು.
ಆರತಕ್ಷತೆ ವೇಳೆ ಕುಸಿದು ಬಿದ್ದು ಅವರ ಮೆದುಳು ನಿಷ್ಕ್ರಿಯವಾಗಿದೆ. ಇಂಥ ಹೃದಯವಿದ್ರಾವಕ ದುರಂತದ ನಡುವೆಯೂ ಆಕೆಯ ಪೋಷಕರು ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದೊಂದು ಮಹತ್ಕಾರ್ಯ. ಚೈತ್ರ ಅನೇಕ ಜೀವಗಳನ್ನು ಉಳಿಸುತ್ತಿದ್ದಾರೆ. ನಿಮ್ಹಾನ್ಸ್‍ನಲ್ಲಿ ಇದು ಮೊದಲ ಅಂಗಾಂಗ ಪಡೆಯುವಿಕೆಯಾಗಿದೆ ಎಂದು ಸಚಿವರು ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.