ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ದಿಢೀರ್ ರಾಜೀನಾಮೆ

Spread the love

Brijesh-Kalappa

ಬೆಂಗಳೂರು,ಜ.13-ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಗೆ ಸ್ಪಷ್ಟ ಕಾರಣ ನೀಡಿಲ್ಲವಾದರೂ ಅವರ ದಿಢೀರ್ ರಾಜೀನಾಮೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ನಿನ್ನೆ ರಾತ್ರಿ ದಿಢೀರನೆ ದೆಹಲಿಯಿಂದ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಕಚೇರಿಗೆ ರವಾನಿಸಿದ್ದಾರೆ. ಬ್ರಿಜೇಶ್ ಕಾಳಪ್ಪ ನೀಡಿರುವ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸಿದೆ ಎಂದು ತಿಳಿದುಬಂದಿದೆ.  ನಾನು ನ್ಯಾಯಾಲಯದ ಕಲಾಪಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಾಗಿರುವುದರಿಂದ ರಾಜೀನಾಮೆ ನೀಡುತ್ತಿದ್ದೇನೆ ದಯವಿಟ್ಟು ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಅವರು ಕೋರಿದ್ದಾರೆ.

ಕಾವೇರಿ, ಕೃಷ್ಣ , ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಬ್ರಿಜೇಶ್ ಕಾಳಪ್ಪ ಅವರನ್ನು ಸಿದ್ದರಾಮಯ್ಯ ಅವರು 2015ರಲ್ಲಿ ಕಾನೂನು ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದರು.  ಕೇವಲ ನದಿ ನೀರು ಹಂಚಿಕೆ ವಿವಾದಗಳಲ್ಲದೆ ರಾಜ್ಯದ ನೆಲ, ಭಾಷೆ , ಗಡಿ ಸೇರಿದಂತೆ ಸರ್ಕಾರಕ್ಕೆ ಕೆಲವು ಸಂದರ್ಭಗಳಲ್ಲಿ ಆಪತ್ತು ಎದುರಾದಾಗ ಸೂಕ್ತ ಸಲಹೆ, ನಿರ್ದೇಶನಗಳನ್ನು ನೀಡುತ್ತಿದ್ದರು.  2007 ಫೆಬ್ರವರಿ 5ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿದ ವೇಳೆ ಸುಪ್ರೀಂಕೋರ್ಟ್‍ನಲ್ಲಿ ಇದನ್ನು ಪ್ರಶ್ನಿಸುವಂತೆ ಸಲಹೆ ನೀಡಿದ್ದೇ ಇದೇ ಬ್ರಿಜೇಶ್ ಕಾಳಪ್ಪ.

ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ರಾಜ್ಯದ ಪರ ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಅವರು, ಇತ್ತೀಚೆಗೆ ಕೆಲವು ವಿಚಾರಗಳಿಂದ ಬೇಸರಗೊಂಡಿದ್ದರು ಎಂದು ಹೇಳಲಾಗಿದೆ.  ಒಂದು ಮೂಲದ ಪ್ರಕಾರ ಬ್ರಿಜೇಶ್ ಕಾಳಪ್ಪ ಅವರನ್ನು ವಿಧಾನಪರಿಷತ್‍ಗೆ ನಾಮ ನಿರ್ದೇಶನ ಮಾಡುವ ಆಶ್ವಾಸನೆಯನ್ನು ಮುಖ್ಯಮಂತ್ರಿ ನೀಡಿದ್ದರು ಎನ್ನಲಾಗಿದೆ.
ಇದಕ್ಕೆ ಸಿದ್ದರಾಮಯ್ಯ ಒಲವು ತೋರಿದ್ದರೆ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಮತ್ತಿತರರು ಅಪಸ್ವರ ತೆಗೆದಿದ್ದರು. ಈ ಬೆಳವಣಿಗೆಗಳಿಂದಲೂ ಅವರು ನೊಂದು ರಾಜೀನಾಮೆ ನೀಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೂಲತಃ ಕೊಡಗಿನವರಾದ ಬ್ರಿಜೇಶ್ ಕಾಳಪ್ಪ ಹರಿಯಾಣದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ಹಿರಿಯ ವಕೀಲರಾಗಿರುವ ಅವರು ಎಐಸಿಸಿಯ ಅಧಿಕೃತ ವಕ್ತಾರರು ಹೌದು. ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿರುವುದು ನಾನಾ ಸಂಶಯಗಳನ್ನು ಮೂಡಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin