ಹಾವೇರಿ,ಮಾ.2- ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾದ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಮೃತದೇಹವನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಘಟನೆ ನಡೆದು ಈಗಾಗಲೇ 24 ಗಂಟೆ ಕಳೆದಿದ್ದು, ಉಕ್ರೇನ್‍ನ ಕರ್ಕೀವ್‍ನಲ್ಲಿರುವ ನವೀನ್ ಗ್ಯಾನಗೌಡರ್ ಮೃತದೇಹವನ್ನು ಹುಟ್ಟೂರಿಗೆ ತರಲು ಕೇಂದ್ರ ಸರ್ಕಾರ ಉಭಯ ರಾಷ್ಟ್ರಗಳ ಮೇಲೆ ಒತ್ತಡ ಹಾಕಬೇಕೆಂದು ಮೃತನ ಕುಟುಂಬದವರು ಕಣ್ಣೀರಿಡುತ್ತಿದ್ದಾರೆ.
ಮೃತ ನವೀನ್ ಗ್ಯಾನಗೌಡರ್ ಸಹೋದರ ಹರ್ಷ ಮಾತನಾಡಿ, ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸ್ ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ ಎನ್ನುತ್ತಲೇ ಭಾವುಕರಾದರು. ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ಮನೆಯಲ್ಲಿ ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೆ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ಗದ್ಗದಿತರಾದರು.
ಮೃತನ ತಂದೆ ಶೇಖರ್ ಗೌಡರ್ ಮಾತನಾಡಿ, ಭಾರತದಲ್ಲಿ ದುಬಾರಿ ವೈದ್ಯಕೀಯ ಶಿಕ್ಷಣ, ಜಾತೀಯ ವ್ಯವಸ್ಥೆಯಿಂದ ನಮ್ಮ ದೇಶದ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಓದಿನ ಕನಸು ಹೊತ್ತುಕೊಂಡು ಉಕ್ರೇನ್‍ನಂತಹ ದೇಶಕ್ಕೆ ಹೋಗುತ್ತಾರೆ ಎಂದು ವಾಸ್ತವ ಸ್ಥಿತಿ ಬಿಚ್ಚಿಟ್ಟರು.ಭಾರತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದರೆ ಕೋಟ್ಯಂತರ ರೂ. ಲಂಚ ಕೊಡಬೇಕು, ಇದರಿಂದ ಅನೇಕರಿಗೆ ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನವೀನ್ ನನ್ನು ಉಕ್ರೇನ್ ಗೆ ಎಂಬಿಬಿಎಸ್ ಓದಲು ಕಳುಹಿಸಲು ಸ್ನೇಹಿತರು ಮತ್ತು ಸಂಬಂಕರಿಂದ ಹಣ ಸಾಲವಾಗಿ ತೆಗೆದುಕೊಂಡಿದೆ. ಓದಿನಲ್ಲಿ ಪ್ರತಿಭಾವಂತನಾಗಿದ್ದರೂ ಇಲ್ಲಿನ ಶಿಕ್ಷಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಯಿಂದಾಗಿ ತನ್ನ ಮಗನಿಗೆ ಇಲ್ಲಿ ಸೀಟು ಸಿಕ್ಕಿರಲಿಲ್ಲ. ಎಂಬಿಬಿಎಸ್ ಸೀಟು ಸಿಗಲು ಒಂದು ಕೋಟಿಯಿಂದ ಎರಡು ಕೋಟಿಯವರೆಗೆ ಲಂಚ ನೀಡಬೇಕಾಗಿತ್ತು. ಇಲ್ಲಿನ ರಾಜಕೀಯ, ಶಿಕ್ಷಣ ವ್ಯವಸ್ಥೆ, ಜಾತಿ ವ್ಯವಸ್ಥೆ ಕಂಡು ನಮಗೆ ರೋಸಿಹೋಗಿದೆ. ಎಲ್ಲವೂ ಖಾಸಗಿ ಸಂಸ್ಥೆಗಳ ನಿಯಂತ್ರಣದಲ್ಲಿದೆ.
ಕೆಲವೇ ಲಕ್ಷಣಗಳಲ್ಲಿ ಶಿಕ್ಷಣ ಪೂರೈಸಲು ಸಾಧ್ಯವಿರುವಾಗ ಕೋಟ್ಯಂತರ ರೂ. ಏಕೆ ಖರ್ಚು ಮಾಡಬೇಕು, ಉಕ್ರೇನ್‍ನಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಇಲ್ಲಿ ಭಾರತಕ್ಕೆ ಹೋಲಿಸಿದರೆ ಅಲ್ಲಿನ ಉಪಕರಣ, ಸಾಧನಗಳು, ಕಾಲೇಜು, ಬೋಧನೆ ಎಲ್ಲವೂ ಉತ್ತಮವಾಗಿದೆ ಎಂದರು.ಇಲ್ಲಿನ ಕಳಪೆ ಶಿಕ್ಷಣ ವ್ಯವಸ್ಥೆಗೆ ರಾಜಕಾರಣಿಗಳ ಮೇಲೆ ಆರೋಪ ಮಾಡುವ ಶೇಖರ್ ಗೌಡರ್ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ಗವಾಗಿ ಉತ್ತಮ ಶಿಕ್ಷಣ ದೊರಕುವಂತೆ ಮಾಡಬೇಕೆಂದು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನವೀನ್ ಬಾಲ್ಯದಲ್ಲಿಯೇ ಅತ್ಯಂತ ಪ್ರತಿಭಾವಂತ. ಟ್ಯೂಷನ್ ಗೆ ಹೋಗದೆ ತಾನೇ ಕಲಿತು ಓದಿ ವೈದ್ಯಕೀಯ ಪದವಿ ಗಳಿಸಿದ್ದ. 10ನೇ ತರಗತಿಯಲ್ಲಿದ್ದಾಗ ಶೇಕಡಾ 96 ಮತ್ತು 12ನೇ ತರಗತಿಯಲ್ಲಿ ಶೇಕಡಾ 97 ಅಂಕಗಳು ಬಂದಿದ್ದತ್ತು. ವಿಜ್ಞಾನ ವಿಷಯದಲ್ಲಿ ಅತ್ಯಂತ ಚುರುಕಾಗಿದ್ದ ನವೀನ್ 10ನೇ ತರಗತಿಯಲ್ಲಿದ್ದಾಗಲೇ ವೈದ್ಯನಾಗುವ ಕನಸು ಕಂಡಿದ್ದ ಎಂದು ಪೋಷಕರು ಕಳೆದುಕೊಂಡ ಮಗನನ್ನು ನೆನೆಸಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ.
