ನವೀನ್ ಮೃತದೇಹವನ್ನು ತರುವ ಪ್ರಯತ್ನ ಮುಂದುವರೆದಿದೆ : ಸಿಎಂ

Social Share

ಬೆಂಗಳೂರು,ಮಾ.8- ಉಕ್ರೇನ್‍ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಸಾವನ್ನಪ್ಪಿದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಯತ್ನ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನ ಕ್ಯಿವ್‍ನಲ್ಲಿ ನವೀನ್ ಮೃತದೇಹವನ್ನು ಸುರಕ್ಷಿತವಾಗಿ ಕೆಡದಂತೆ ಇಡಲಾಗಿದೆ. ಪರಿಸ್ಥಿತಿ ನೋಡಿಕೊಂಡು ಹುಟ್ಟೂರಿಗೆ ತರಲಾಗುವುದು ಎಂದು ತಿಳಿಸಿದರು.
ನಾನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಹೇಗಾದರೂ ಮಾಡಿ ಮೃತದೇಹವನ್ನು ಅವರ ಹುಟ್ಟೂರಿಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದ್ದೇವೆ. ನಮಗೆ ಅವರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಉಕ್ರೇನ್‍ನ ಕೆಲವು ಪ್ರಮುಖ ನಗರಗಳಲ್ಲಿ ಈಗಲೂ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ಅಲ್ಲಿ ನಿರಂತರವಾಗಿ ಬಾಂಬ್ ದಾಳಿ, ಶೆಲ್ ದಾಳಿ, ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಸಮಯ ಮತ್ತು ಪರಿಸ್ಥಿತಿ ನೋಡಿಕೊಂಡು ಕರೆತರುವುದಾಗಿ ಮಾಹಿತಿ ನೀಡಿದರು.
ಬಾಂಬೆ ಹೈಕೋರ್ಟ್ ಮಾಸ್ಕ್ ಹಾಕುವುದನ್ನು ರದ್ದುಪಡಿಸಿ ನೀಡಿರುವ ತೀರ್ಪಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನ್ಯಾಯಾಲಯ ಏನು ತೀರ್ಪು ನೀಡಿದೆ ಎಂಬುದನ್ನು ಅಧ್ಯಯನ ಮಾಡಿ ಮಾಹಿತಿ ನೀಡುತ್ತೇನೆ ಎಂದರು.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಚುನಾವಣೋತ್ತರ ಸಮೀಕ್ಷೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಪ್ರದೇಶ,ಉತ್ತರಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಅಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸವಿತ್ತು. ಇದೀಗ ಚುನಾವಣೋತ್ತರ ಸಮೀಕ್ಷೆಗಳು ಕೂಡ ಬಿಜೆಪಿಯೇ ಅಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಈ ಐದು ರಾಜ್ಯಗಳ ಪೈಕಿ 4 ರಾಜ್ಯಗಳು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Articles You Might Like

Share This Article