ಸೈಲೆಂಟಾಗಿ ಹರಡುತ್ತಿದೆ ರೂಪಾಂತರಿ ವೈರಸ್, ರಾಜ್ಯದಲ್ಲಿ 10 ಮಂದಿಗೆ ಪಾಸಿಟಿವ್..!

ಬೆಂಗಳೂರು,ಜ.2-ಬ್ರಿಟನ್‍ನಲ್ಲಿ ರೂಪಾಂತರಿ ವೈರಸ್ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹಬ್ಬುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬ್ರಿಟನ್‍ನಿಂದ ಆಗಮಿಸಿದ್ದ 42 ಜನರಿಗೆ ಆರ್‍ಟಿಪಿಸಿಆರ್ ನಡೆಸಲಾಗಿತ್ತು ಇದರಲ್ಲಿ 32 ವಅುಂದಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ ಬ್ರಿಟನ್ ಮಾದರಿಯ 10 ಮಂದಿಗೆ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ ಎಂದು ಖುದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 10 ಮಂದಿಗೆ ಬ್ರಿಟನ್ ಮಾದರಿಯ ಸೋಂಕು ಕಾಣಿಸಿಕೊಂಡಿದೆ. ಒಟ್ಟು 42 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲರೂ ಆರೋಗ್ಯವಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲರನ್ನು ನಿಗದಿಪಡಿಸಿದ ಆಸ್ಪತ್ರೆಯಲ್ಲೇ ಚಿಕಿತ್ಸೆಗೊಳಪಡಿಸಲಾಗಿದೆ. ಯಾರಿಗೂ ತೀವ್ರತರವಾದ ಸೋಂಕು ಆವರಿಸಿಲ್ಲ. ಸಾರ್ವಜನಿಕರು ಆತಂಕ ಪಡಬಾರದು ಎಂದು ಮನವಿ ಮಾಡಿದರು.

# ತಂದೆ ನೋಡಲು ಬಂದ ಪುತ್ರಿಗೂ ಸೋಂಕು:
ರಾಜಾಜಿನಗರದಲ್ಲಿ ಬ್ರಿಟನ್‍ನ ರೂಪಾಂತರಿ ಸೋಂಕು ಈ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಸ್ಥಳೀಯ ಜನರನ್ನು ಚಿಂತೆಗೀಡು ಮಾಡಿದೆ. ಸರಿಸುಮಾರು ಈ ಪ್ರದೇಶದಲ್ಲೇ 3ರಿಂದ 4 ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಮನೆಯನ್ನು ಶೀಲ್‍ಡೌನ್ ಮಾಡಲಾಗಿದೆ. ಡಿ.19ರಂದು ಐಸಿಯುನಲ್ಲಿದ್ದ ತಂದೆಯನ್ನು ನೋಡಲು ಬಂದಿದ್ದ ಮಗಳಿಗೂ ಸೋಂಕು ಕಾಣಿಸಿಕೊಂಡಿದೆ. ನಂತರ ಪುತ್ರಿಯಿಂದ ತಾಯಿಗೂ ಕೂಡ ಸೋಂಕು ದೃಢಪಟ್ಟಿದೆ. ಹೀಗೆ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಭಾಗದ ಜನರು ಆತಂಕದಿಂದ ದಿನಗಳನ್ನು ನೂಕುತ್ತಿದ್ದಾರೆ.