ಸಂಪುಟ ವಿಸ್ತರಣೆ ವರಿಷ್ಠರ ವಿವೇಚನೆಗೆ ಬಿಟ್ಟಿದ್ದು : ಬಿಎಸ್‌ವೈ

Social Share

ಶಿವಮೊಗ್ಗ,ಜ.9- ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗುತ್ತಿದ್ದು ಅತಿ ಶೀಘ್ರದಲ್ಲೇ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಆದಷ್ಟು ಶೀಘ್ರ ಸಿಹಿ ಸುದ್ದಿ ಹೊರಬೀಳಲಿದೆ ಎಂದರು.

ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿ , ರಾಜ್ಯದ ಉಸ್ತುವಾರಿ ಹಾಗೂ ವರಿಷ್ಠರು ತೀರ್ಮಾನಿಸುತ್ತಾರೆ. ಆಕಾಂಕ್ಷಿಗಳು ಹೆಚ್ಚಾಗಿದ್ದರೂ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರಬೇಕಾಗುತ್ತದೆ ಎಂದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಸಚಿವ ಸ್ಥಾನ ನೀಡುವುದು ವರಿಷ್ಠರ ವಿವೇಚನೆಗೆ ಬಿಟ್ಟಿದ್ದು. ಯಾರಿಗೆ ಯಾವ ಸ್ಥಾನ ನೀಡಬೇಕ ಎಂಬುದನ್ನು ಸೂಕ್ತ ಕಾಲದಲ್ಲಿ ಪಕ್ಷ ತೀರ್ಮಾನಿಸುತ್ತದೆ. ಎಷ್ಟು ಸ್ಥಾನ ಭರ್ತಿ ಮಾಡುತ್ತಾರೆ ಎಂಬ ಬಗ್ಗೆ ಈವರೆಗೂ ನನಗೆ ಮಾಹಿತಿ ಇಲ್ಲ ಎಂದು ಬಿಎಸ್ವೈ ಸ್ಪಷ್ಟಪಡಿಸಿದರು.

ಕೋಲಾರದಿಂದಲೇ ಕಣಕ್ಕಿಳಿಯಲು ಸಿದ್ದರಾಮಯ್ಯ ಪೂರ್ವ ತಯಾರಿ, ಮುನಿಯಪ್ಪ ಜೊತೆ ಮೀಟಿಂಗ್

ಕಾಂಗ್ರೆಸ್ ವಿರುದ್ಧ ಕಿಡಿ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಳ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಿರುವ ಟೀಕೆಗಳಿಗೆ ಕಿಡಿಕಾರಿದ ಅವರು, ಅಧಿಕಾರದಲ್ಲಿದ್ದಾಗ ಈ ಸಮುದಾಯಕ್ಕೆ ನಯಾಪೈಸಾ ಏನೂ ಮಾಡದವರು ಈಗ ಬಿಜೆಪಿ ಸರ್ಕಾರಕ್ಕೆ ಶ್ರೇಯಸ್ಸು ಸಲ್ಲುತ್ತದೆ ಎಂಬ ಕಾರಣಕ್ಕೆ ಮನಬಂದಂತೆ ಮಾತನಾಡುತ್ತಿದ್ದಾರೆ. ತಲೆಕೆಟ್ಟವರಂತೆ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕೆಂದು ಆಗ್ರಹಿಸಿದರು.

ನಮ್ಮ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಆ ಸಮುದಾಯದವರೇ ಸ್ವಾಗತ ಮಾಡಿದ್ದಾರೆ. ಇದೊಂದು ಐತಿಹಾಸಿಕ ತೀರ್ಮಾನ. ಆ ಎರಡು ಸಮುದಾಯದ ಮೂಗಿಗೆ ತುಪ್ಪ ಸವರಿದವರು ಈಗ ಕಣ್ಣೋರೆಸುವ ತಂತ್ರ ಮಾಡುತ್ತಿದ್ದಾರೆ ಎಂದು ಬಿಎಸ್ವೈ ಟೀಕಾ ಪ್ರಹಾರ ಮಾಡಿದರು.

ಅದರಲ್ಲೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರು ಮನಸೋಇಚ್ಚೆ ಮಾತನಾಡುತ್ತಿದ್ದಾರೆ. ಆ ಸಮುದಾಯದ ಬಗ್ಗೆ ನಿಮಗೆ ನಿಜವಾದ ಕಳಕಳಿ ಇದ್ದರೆ ನಮ್ಮ ಸರ್ಕಾರದ ನಿರ್ಧಾರವನ್ನು ನೀವು ಸ್ವಾಗತ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನದ ಪರಿಚ್ಛೇಧ 9ಕ್ಕೆ ಸೇರ್ಪಡೆ ಮಾಡಬೇಕಾದ ಅಗತ್ಯ ಬಂದರೆ ಖಂಡಿತವಾಗಿಯೂ ಸರ್ಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೀಸಲಾತಿ ಹೆಚ್ಚಳ ಮಾಡಲಿಲ್ಲ.

ಟೀಕೆಗೋಸ್ಕರ ಟೀಕೆ ಮಾಡಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ನಮ್ಮ ನಿಲುವಿನಲ್ಲಿ ಯಾವುದೇ ಗೊಂದಲವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

Articles You Might Like

Share This Article