ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬಿಎಸ್ವೈ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೇ..?
ಬೆಂಗಳೂರು,ಮೇ 25- ವಿಧಾನಪರಿಷತ್ ಚುನಾವಣೆಗೆ ತಮ್ಮ ಪುತ್ರನಿಗೆ ಟಿಕೆಟ್ ತಪ್ಪಿರುವುದಕ್ಕೆ ತಮಗೆ ಯಾವುದೇ ಬೇಸರವಿಲ್ಲ. ಪಕ್ಷ ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆಲ್ಲ ಪಕ್ಷ ಗುರುತಿಸಿ ಟಿಕೆಟ್ ನೀಡಿದೆಯೋ ಅವರಿಗೆ ನಮ್ಮ ಸಹಮತವಿದೆ. ಯಾವುದೇ ವಿರೋಧವಿಲ್ಲ ಎಂದರು.
ಈಗಾಗಲೇ ಪಕ್ಷ ವಿಜಯೇಂದ್ರ ಕಾರ್ಯ ಗುರುತಿಸಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಂತರ ಉಪಾಧ್ಯಕ್ಷ ಸ್ಥಾನ ನೀಡಿದೆ. ಮುಂದೆಯೂ ಗುರುತಿಸಲಿದೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದಾರೆ. ಟಿಕೆಟ್ ತಪ್ಪಿದ್ದರ ಬಗ್ಗೆ ಅಸಮಾಧಾನವಿಲ್ಲ ಎಂದು ಹೇಳಿದರು.
ಯಾರು ಸಹ ಅಸಮಾಧಾನ ಹೊರಹಾಕಬಾರದು. ಯಾವುದೇ ರೀತಿಯ ಗೊಂದಲ ಸೃಷ್ಟಿಸಬಾರದು. ಪಕ್ಷದ ವರಿಷ್ಠರು ನೀಡಿದ ತೀರ್ಮಾನಕ್ಕೆ ಬದ್ದರಾಗಿ ಕೆಲಸ ಮಾಡೋಣ ಎಂದರು. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಸಂಘಟನೆ ಸೇರಿದಂತೆ ಇನ್ನಿತರೆ ಕಾರ್ಯದಲ್ಲಿ ತೊಡಗುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.