ಬಿಎಸ್‍ವೈ ಮುಂದೆ ಮಂಡಿಯೂರಿದ ಹೈಕಮಾಂಡ್

ಬೆಂಗಳೂರು, ಆ.4- ಸಂಪುಟ ವಿಸ್ತರಣೆಯಲ್ಲಿ ಮೇಲುಗೈ ಸಾಧಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್‍ಗೆ ಡಿಚ್ಚಿ ಹೊಡೆದಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಯಡಿ ಯೂರಪ್ಪ ಹೈಕಮಾಂಡ್‍ನ ನೇರ ನಿಗಾವಣೆ ಯಲ್ಲಿದ್ದರು. ಪ್ರತಿಯೊಂದಕ್ಕೂ ದಿಲ್ಲಿಯ ವರಿಷ್ಠರ ಆಣತಿಯನ್ನು ನಿರೀಕ್ಷಿಸಬೇಕಿತ್ತು. ಅಧಿಕಾರದಿಂದ ನಿರ್ಗಮಿಸಿದ ಬಳಿಕ ಯಡಿಯೂರಪ್ಪ ತಮ್ಮ ಹಳೆಯ ರಾಜಕೀಯ ಮುತ್ಸದ್ಧಿತನಕ್ಕೆ ಮರಳಿದ್ದಾರೆ.

ತಮ್ಮ ವಿರುದ್ಧ ಸಮರ ಸಾರಿದ್ದವರನ್ನು ಸಂಪುಟದಿಂದ ದೂರ ಇಡುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ದೆಹಲಿ ಹೈಕಮಾಂಡ್ ಯಡಿಯೂರಪ್ಪ ಅವರ ಮುಂದೆ ಮಂಡಿಯೂರಿದಂತಾಗಿದೆ. ಇನ್ನು ಮುಂದೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರೂ ಕೂಡ ಯಡಿಯೂರಪ್ಪ ಅವರ ಪ್ರಭಾವಳಿಯನ್ನು ಹತ್ತಿಕ್ಕುವುದು ಸುಲಭ ಸಾಧ್ಯವಲ್ಲ.

ಯಾವುದೇ ಅಧಿಕಾರ ಇಲ್ಲದೆ ಇರುವ ಯಡಿಯೂರಪ್ಪ ಅವರು ಪಕ್ಷದ ಹಿಡಿತವನ್ನು ಸಡಿಲವಾಗಲು ಬಿಟ್ಟಿಲ್ಲ. ಪ್ರತಿ ಹಂತದಲ್ಲೂ ಯಡಿಯೂರಪ್ಪ ಅವರನ್ನು ದಾಟಿಯೇ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ. ಹೈಕಮಾಂಡ್ ಕೂಡ ಅಷ್ಟು ಸುಲಭವಾಗಿ ಯಡಿಯೂರಪ್ಪ ಅವರನ್ನು ಇನ್ನು ಮುಂದೆ ಬದಿಗೆ ಸರಿಸಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದಲ್ಲಿ ಎರಡನೆ ಶಕ್ತಿ ಕೇಂದ್ರ ಪ್ರಬಲವಾಗುತ್ತಿದೆ.

ಈ ರೀತಿ ಹೈಕಮಾಂಡ್ ಮಂಡಿಯೂರುವ ಬದಲಾಗಿ ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಯಾಗಿ ಮುಂದುವರಿಸಿದ್ದರೆ ಸೂಕ್ತವಾಗಿರುತ್ತಿತ್ತು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಪ್ರತಿಬಾರಿ ರಾಜ್ಯ ರಾಜಕಾರಣದಲ್ಲಿ ತನ್ನ ಹಿಡಿತ ಸಾಧಿಸುವ ಕಸರತ್ತು ನಡಸುತ್ತದೆ. ಇದು ಎಲ್ಲ ಪಕ್ಷಗಳಲ್ಲೂ ಸಹಜವಾಗಿದ್ದು, ಬಿಜೆಪಿಯಲ್ಲಿ ಒಂದಿಷ್ಟು ಹೆಚ್ಚೇ ಇದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 20 ದಿನಗಳ ಕಾಲ ಸಂಪುಟ ವಿಸ್ತರಣೆಗೆ ಬಿಟ್ಟಿರಲಿಲ್ಲ. ಈ ಬಾರಿ ಒಂದು ವಾರವಾದರೂ ಅನುಮತಿ ನೀಡದೆ ಸತಾಯಿಸಿದೆ. ನೆರೆ, ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ನಾಲ್ಕು ದಿನಗಳ ಕಾಲ ದೆಹಲಿಯಲ್ಲಿರುವಂತೆ ಮಾಡಿ ರಾಜ್ಯದ ಆಡಳಿತದ ಅರಾಜಕತೆಗೆ ಹೈಕಮಾಂಡ್ ಕಾರಣವಾಗಿದೆ.

ಏಕವ್ಯಕ್ತಿ ಸಂಪುಟ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸಲಾಗದೆ ಜನ ಸಂಕಷ್ಟದಲ್ಲಿದ್ದಾರೆ. ಆಡಳಿತಕ್ಕಿಂತಲೂ ಅಧಿಕಾರ ಮುಖ್ಯ ಎಂಬಂತೆ ಬಿಜೆಪಿ ವರ್ತಿಸುತ್ತಿದ್ದು, ಜನರ ಟೀಕೆಗೆ ಗುರಿಯಾಗಿದೆ.