ಶಿವಮೊಗ್ಗ – ಮಂಗಳೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮನವಿ

BS Yeddyurappaಶಿವಮೊಗ್ಗ, ಜ.14-ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರರವರು ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿಯಾಗಿ, ಶಿವಮೊಗ್ಗ – ಮಂಗಳೂರು ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಆದರೆ ಪಶ್ಚಿಮಘಟ್ಟದಂಚಿನಲ್ಲಿ ಈ ಮಾರ್ಗ ಹಾದು ಹೋಗಬೇಕಾಗಿರುವುದರಿಂದ ಈ ಯೋಜನೆ ಅನುಷ್ಠಾನ ಕಷ್ಟಸಾಧ್ಯವೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಶಿವಮೊಗ್ಗ – ಮಂಗಳೂರು ನಡುವೆ ರೈಲ್ವೆ ಸಂಪರ್ಕ ಏರ್ಪಟ್ಟರೇ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಸಂಪರ್ಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ಕಂಡುಬರಲಿದೆ.

ಎರಡೂ ಕಡೆಯವರೆಗೂ ಕೈಗಾರಿಕೆ, ವ್ಯಾಪಾರ-ವಹಿವಾಟಿಗೂ ಅನುಕೂಲವಾಗಲಿದೆ. ಬಯಲು ಸೀಮೆ, ಕರಾವಳಿ ಸಂಪರ್ಕ ಮತ್ತಷ್ಟು ಹತ್ತಿರವಾಗಲಿದೆ. ಎಲ್ಲ ದೃಷ್ಟಿಯಿಂದಲೂ ಶಿವಮೊಗ್ಗ -ಮಂಗಳೂರು ರೈಲ್ವೆ ಮಾರ್ಗ ಲಾಭದಾಯಕವಾಗಿದೆ. ಆದರೆ, ಈ ಮಾರ್ಗ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಇಲಾಖೆ ಅನುಮತಿ ನೀಡಿದರೂ, ಅನುಷ್ಠಾನ ಅಷ್ಟೊಂದು ಸುಲಭವಲ್ಲವಾಗಿದೆ.

ಪಶ್ಚಿಮಘಟ್ಟ ಅರಣ್ಯದಂಚಿನಲ್ಲಿ ಈ ಮಾರ್ಗ ಹಾದು ಹೋಗಬೇಕಾಗಿರುವುದರಿಂದ, ಅರಣ್ಯ ಹಾಗೂ ಪರಿಸರ ಇಲಾಖೆಗಳ ಹಸಿರು ನಿಶಾನೆ ದೊರಕದಿರುವ ಸಾಧ್ಯತೆಗಳೇ ಹೆಚ್ಚಿದೆ. ಇದಕ್ಕಾಗಿ ಸಾಕಷ್ಟು ಹರಸಾಹಸ ನಡೆಸಬೇಕಾಗುತ್ತದೆ.

ಈಗಾಗಲೇ ರಾಜ್ಯದ ಕೆಲ ಮಹತ್ವದ ರೈಲ್ವೆ ಯೋಜನೆಗಳಿಗೆ ರೈಲ್ವೆ ಇಲಾಖೆ ಅನುಮತಿ ನೀಡಿದರೂ, ಅರಣ್ಯ ಪ್ರದೇಶದಲ್ಲಿ ಮಾರ್ಗ ಹಾದು ಹೋಗಬೇಕಾಗಿರುವ ಕಾರಣದಿಂದಲೇ ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ದೊರಕದಿರುವುದಿಂದ ಹಲವು ದಶಕಗಳಿಂದ ಮಾರ್ಗ ನಿರ್ಮಾಣ ಪ್ರಕ್ರಿಯೆ ಆರಂಭವಾಗಿಲ್ಲವಾಗಿದೆ.

ಅರಣ್ಯಕ್ಕೆ ಧಕ್ಕೆಯಾಗುವ ಉದ್ದೇಶದಿಂದಲೇ ಹಲವು ರೈಲ್ವೆ ಯೋಜನೆಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ. ಇದಕ್ಕೆ ಹುಬ್ಬಳ್ಳಿ-ಅಂಕೋಲ ನಡುವಿನ ರೈಲ್ವೆ ಮಾರ್ಗವೇ ಸಾಕ್ಷಿಯಾಗಿದೆ. ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕ ಹಾಗೂ ಬಯಲು ಸೀಮೆಯ ಕೆಲ ಜಿಲ್ಲೆಯವರು ಅತೀ ಹೆಚ್ಚಾಗಿ ಶಿವಮೊಗ್ಗ ಮಾರ್ಗವಾಗಿಯೇ ಮಂಗಳೂರು, ಉಡುಪಿಗೆ ತೆರಳುತ್ತಾರೆ.

ಧಾರ್ಮಿಕ ಕ್ಷೇತ್ರಗಳ ಭೇಟಿ, ವ್ಯಾಪಾರ-ವಹಿವಾಟು, ಆಸ್ಪತ್ರೆ ಮತ್ತೀತರ ಕಾರಣಗಳಿಂದ ಕರಾವಳಿಯ ನಗರಗಳಿಗೆ ಹೋಗಿಬರುವವರ ಸಂಖ್ಯೆ ಹೆಚ್ಚಿದ್ದು, ಮಧ್ಯ ಕರ್ನಾಟಕ ಭಾಗದವರಿಗೆ ರಸ್ತೆ ಮಾರ್ಗವೇ ಕರಾವಳಿ ಸಂಪರ್ಕದ ಏಕೈಕ ಕೊಂಡಿಯಾಗಿದೆ.

ಈ ಎಲ್ಲ ಕಾರಣಗಳಿಂದ ಶಿವಮೊಗ್ಗ-ಮಂಗಳೂರು ನಡುವೆ ರೈಲ್ವೆ ಮಾರ್ಗ ನಿರ್ಮಿಸಿದರೆ ಲಾಭದಾಯಕವಾಗಲಿದೆ. ರೈಲ್ವೆ ಇಲಾಖೆಗೂ ಅನುಕೂಲಕರವಾಗಲಿದೆ. ಮಲೆನಾಡಿಗರಿಗೆ ಕೇರಳ ರಾಜ್ಯದ ಸಂಪರ್ಕವೂ ಸುಲಭಸಾಧ್ಯವಾಗಲಿದೆ. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ – ಮಂಗಳೂರು ನಗರಗಳ ನಡುವೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂಬ ಪ್ರಸ್ತಾಪವಿತ್ತು.

ಈ ಹಿಂದೆ ರಾಜ್ಯದವರೇ ಆದ ಸಂಸದ ಡಿ.ವಿ.ಸದಾನಂದಗೌಡರವರು ರೈಲ್ವೆ ಸಚಿವರಾಗಿದ್ದಾಗ ಮಂಡಿಸಿದ ಬಜೆಟ್‍ನಲ್ಲಿ ಮೊದಲ ಬಾರಿಗೆ ಶಿವಮೊಗ್ಗ – ಮಂಗಳೂರು ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಾಣದ ಪ್ರಸ್ತಾಪ ಮಾಡಿದ್ದರು. ಅವರು ರೈಲ್ವೆ ಸಚಿವ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಈ ಯೋಜನೆಯು ಕೂಡ ಮೂಲೆಗುಂಪಾಗಿತ್ತು. ಮುಂದಿನ ದಿನಗಳಲ್ಲಿ ಈ ಯೋಜನೆಯ ಅನುಷ್ಠಾನ ಇನ್ಯಾವ ತಿರುವು ಪಡೆದುಕೊಳ್ಳಲಿದೆಯೋ ಎಂಬುವುದನ್ನು ಕಾದು ನೋಡಬೇಕಾಗಿದೆ.