ಬೆಂಗಳೂರು,ಜು.24- ಕರ್ನಾಟಕದಲ್ಲಿ ಬೇರು ಮಟ್ಟದಿಂದ ಪಕ್ಷವನ್ನು ಸಂಘಟಿಸಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರುನಾಡಲ್ಲಿ ಕೇಸರಿ ಬಾವುಟ ಹಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆಗೆದುಕೊಂಡ ಅದೊಂದು ನಿರ್ಧಾರ ಇದೀಗ ಅನೇಕರಿಗೆ ಟಿಕೇಟ್ ಕೈ ತಪ್ಪುವ ಭೀತಿ ಎದುರಾಗಿದೆ.
ಯಡಿಯೂರಪ್ಪನವರ ಈ ನಿರ್ಧಾರದಿಂದ 2023ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಅನೇಕ ಹಿರಿಯರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಟಿಕೆಟ್ ನೀಡದಿರುವುದು ಹಾಗೂ ಪಕ್ಷದಲ್ಲಿ ಯಾವುದೇ ರೀತಿಯ ಸ್ಥಾನಮಾನಗಳನ್ನು ನೀಡುವುದಿಲ್ಲ. ಕೇವಲ ಅವರನ್ನು ಮಾರ್ಗದರ್ಶಕ ಮಂಡಳಿಗೆ ನೇಮಕ ಮಾಡಲಾಗುತ್ತದೆ.
ಈಗ ಯಡಿಯೂರಪ್ಪನವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿಯಾಗುತ್ತೇನೆ ಎಂದು ಹೇಳಿರುವುದು ಪಕ್ಷದ ಹಿರಿಯ ಕಟ್ಟಾಳುಗಳಿಗೆ ಟಿಕೆಟ್ ಕೈತಪ್ಪುವ ಆತಂಕ ಶುರುವಾಗಿದೆ. 2023ರ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಉಮೇಶ್‍ಕತ್ತಿ, ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಎಸ್.ಸುರೇಶ್‍ಕುಮಾರ್, ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಎ.ರವೀಂದ್ರನಾಥ್ ಸೇರಿದಂತೆ ಮತ್ತಿತರರಿಗೆ ಕೋಕ್ ಕೊಡಲಾಗುತ್ತದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳುಬರುತ್ತಿದೆ.
ಇದೇ ರೀತಿ ಸಂಸದರಾದ ಬಿ.ಎನ್.ಬಚ್ಚೇಗೌಡ, ರಮೇಶ್ ಜಿಗಜಿಣಗಿ, ಪಿ.ಸಿ.ಗದ್ದೀಗೌಡರು, ಜಿ.ಎಂ.ಸಿದ್ದೇಶ್ವರ್ ಮತ್ತಿತರರಿಗೂ 2024ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಜೊತೆ ಕೈಜೋಡಿಸಿದವರಲ್ಲಿ ಕೆ.ಎಸ್.ಈಶ್ವರಪ್ಪ ಕೂಡ ಒಬ್ಬರು.
ಶಿವಮೊಗ್ಗ ವಿಧಾನಸಭೆಯಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದರೂ ಅಚ್ಚರಿ ಇಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದ್ದರಿಂದ ವಿ ಇಲ್ಲದೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಹಿರಿತನವನ್ನೇ ಬಿಜೆಪಿ ವರಿಷ್ಠರು ಪರಿಗಣಿಸಿದರೆ ಈ ಬಾರಿ ತ್ಯಾಗ ಮಾಡುವುದು ಅನಿವಾರ್ಯವಾಗುತ್ತದೆ.
ಮೂಲತಃ ಜನತಾ ಪರಿವಾರದಿಂದ ತಮ್ಮ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಹಿರಿಯ ಮಾರ್ಗದರ್ಶಕ ಮಂಡಳಿಗೆ ಸೇರಬೇಕಾಗುತ್ತದೆ. 2018ರಲ್ಲೇ ನನ್ನ ಕೊನೆಯ ಚುನಾವಣೆ ಎಂದಿದ್ದ ಅವರು, ಮತ್ತೆ 2023ರಲ್ಲಿ ಮುಧೋಳದಿಂದ ಸ್ರ್ಪಧಿಸುವ ಇಂಗಿತವನ್ನು ವ್ಯಕ್ತಪಡಿಸಿದರಾದರೂ ಪಕ್ಷದ ವರಿಷ್ಠರು ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ವಸತಿ ಸಚಿವ ವಿ.ಸೋಮಣ್ಣ ಕೂಡ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವ ತವಕದಲ್ಲಿದ್ದಾರೆ. ಆದರೆ ಪಕ್ಷವು ಬೇರೆಯದೇ ಆದ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಹೀಗಾಗಿ ಸೋಮಣ್ಣ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಖಾತರಿ ಇಲ್ಲ. ವೈಯಕ್ತಿಕವಾಗಿ ಯಾವುದೇ ಕಳಂಕ ಅಥವಾ ಭ್ರಷ್ಟಾಚಾರದ ಆರೋಪ ಹೊತ್ತಿಕೊಳ್ಳದಿದ್ದರೂ ಮಾಜಿ ಸಚಿವ ಸುರೇಶ್‍ಕುಮಾರ್ ಕೂಡ ಟಿಕೆಟ್ ಕೈ ತಪ್ಪುವ ಭೀತಿ ಎದುರಿಸುತ್ತಿದ್ದಾರೆ.
75 ವರ್ಷ ದಾಟದಿದ್ದರೂ ಅವರು ಪ್ರತಿನಿಸುತ್ತಿರುವ ರಾಜÁಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಬೇರೊಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸಿದೆ.
ಸಂಸದರಿಗೂ ಕೋಕ್: ಶಾಸಕರಂತೆ 2024ರ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಸಂಸದರಿಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲಘಿ. ಚಿಕ್ಕಬಳ್ಳಾಪುರ ಬಚ್ಚೇಗೌಡ, ಚಾಮರಾಜನಗರ ವಿ.ಶ್ರೀನಿವಾಸ್‍ಪ್ರಸಾದ್, ವಿಜಾಪುರದ ರಮೇಶ್ ಜಿಗಜಿಣಗಿ, ದಾವಣಗೆರೆ ಜಿ.ಎಂ.ಸಿದ್ದೇಶ್ವರ್ ಹೀಗೆ ಹಲವರಿಗೆ ಇದು ಕೊನೆಯ ಚುನಾವಣೆಯಾಗುವ ಸಾಧ್ಯತೆ ಇದೆ.
ವಯಸ್ಸಿನ ಕಾರಣ ಹಾಗೂ 2ನೇ ಹಂತದ ನಾಯಕರನ್ನು ಬೆಳೆಸಬೇಕೆಂಬ ಕಾರಣಕ್ಕಾಗಿ ಹಿರಿಯ ಕಟ್ಟಾಳುಗಳಿಗೆ ಟಿಕೆಟ್ ಕೈ ತಪ್ಪುವ ಸಂಭವಿದೆ ಎಂದು ಮೂಲಗಳು ತಿಳಿಸಿವೆ.