ಬೆಂಗಳೂರು, ಆ.18- ಹೈಕಮಾಂಡ್ ತಮಗೆ ಹೊಸ ಜವಾಬ್ದಾರಿ ನೀಡುತ್ತಿದ್ದಂತೆ ಹೊಸ ಹುಮ್ಮಸ್ಸು, ಹುರುಪು ಯಡಿಯೂರಪ್ಪ ಅವರಿಗೆ ಬಂದಿದ್ದು, ಈ ಹೊತ್ತಿನಲ್ಲಿ ದೇವರ ಆಶೀರ್ವಾದ ಪಡೆಯಲೆಂದು ಇಂದು ಸಂಜೆ ತಿರುಪತಿಯ ತಿಮ್ಮಪ್ಪನ ದರ್ಶನ ಮಾಡಲಿದ್ದಾರೆ.
ಸಿಎಂ ಬೊಮ್ಮಾಯಿ ತಮಿಳು ನಾಡು ಪ್ರವಾಸದಲ್ಲಿದ್ದು, ಅವರು ಮಧ್ಯಾಹ್ನ ವಾಪಸಾದ ಮೇಲೆ ಸಿಎಂ ಬೊಮ್ಮಾಯಿ, ಸಚಿವ ಅಶೋಕ್ ಜೊತೆ ಬಿ.ಎಸ್. ಯಡಿಯೂರಪ್ಪ ಇಂದು ಸಾಯಂಕಾಲ ತಿರುಪತಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಅಭಿನಂದನೆಗಳ ಮಹಾಪೂರ: ನಿನ್ನೆ ಮಧ್ಯಾಹ್ನದಿಂದ ಬಿಎಸ್‍ವೈ ನಿವಾಸದಲ್ಲಿ ಬೆಂಬಲಿಗರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರಿಂದ ತುಂಬಿತುಳುಕುತ್ತಿದೆ. ಬಿಜೆಪಿ ನಾಯಕರು, ಶಾಸಕರು, ಕಾರ್ಯಕರ್ತರು ಅವರನ್ನು ಭೇಟಿ ಮಾಡಿ ಅಭಿನಂದನೆ, ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಬೂಕನಕೆರೆಯಲ್ಲಿ ಸನ್ಮಾನ: ಬಿಎಸ್‍ವೈಗೆ ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿದ್ದಕ್ಕೆ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಬೆಂಬಲಿಗರು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ. ಬಿಎಸ್‍ವೈಗೆ ಸನ್ಮಾನ ನೀಡಲು ರಾಜ್ಯ ಬಿಜೆಪಿ ಘಟಕ ಯೋಜನೆ ಹಮ್ಮಿಕೊಂಡಿದೆ. ಆ.28ರಂದು ಬಿಎಸ್‍ವೈ ಸ್ವಗ್ರಾಮ ಬೂಕನಕೆರೆಯಲ್ಲಿ ಸಮಾವೇಶ ಮಾಡಿ ಸನ್ಮಾನ ಮಾಡಲು ಯೋಜನೆ ಹಮ್ಮಿಕೊಂಡಿದೆ.
ಸಂಸದೀಯ ಮಂಡಳಿಗೆ ನೇಮಕವಾಗುತ್ತಿದ್ದಂತೆ ಯಡಿಯೂರಪ್ಪನವರಿಗೆ ಬಿಜೆಪಿಯ ಕೇಂದ್ರ ನಾಯಕರಿಂದ ಹಿಡಿದು ರಾಜ್ಯ ಬಿಜೆಪಿ ನಾಯಕರು, ಶಾಸಕರು, ಪಕ್ಷದ ಕಾರ್ಯಕರ್ತರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆಗೆ ನಿನ್ನೆ ಬೆಂಗಳೂರಿನ ಕುಮಾರಕೃಪದಲ್ಲಿರುವ ಬಿಎಸ್‍ವೈ ನಿವಾಸ ಕಾವೇರಿಗೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬಿಎಸ್‍ವೈಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ.