ಬೆಂಗಳೂರು,ಜು.21- ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಯಾರು ಏನೇ ಹೇಳಿದರೂ 2023 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು ಎಂಬಂತೆ ಕಾಂಗ್ರೆಸ್‍ನಲ್ಲಿ ಆಗಲೇ ಮುಖ್ಯಮಂತ್ರಿ ಕುರ್ಚಿಗೆ ಹಾದಿಬೀದಿಯಲ್ಲಿ ಬಡೆದಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಕ್ಕೆ ಬಂದರೆ ತಾನೆ ಮುಖ್ಯಮಂತ್ರಿಯಾಗುವುದು ಎಂದು ವ್ಯಂಗ್ಯವಾಡಿದರು.
ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆ. ಚುನಾವಣೆ ವೇಳೆಗೆ ಅವರ ಆಂತರಿಕ ಕಚ್ಚಾಟ ಮತ್ತಷ್ಟು ಹೆಚ್ಚಾಗಲಿದೆ. ಬಿಜೆಪಿಗೆ ಮತದಾರರು ಮತ್ತೆ ಆಶೀರ್ವದಿಸಲಿದ್ದು, ನಮ್ಮ ನಿರೀಕ್ಷೆಯಂತೆ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದರು.
ಕೆ.ಆರ್.ಪೇಟೆ ಮತ್ತು ಸುತ್ತಮುತ್ತ ಪ್ರವಾಸ ಮಾಡಿಕೊಂಡು ಬರುತ್ತೇನೆ. ಕೆ.ಆರ್. ಪೇಟೆಯಲ್ಲಿ ಬಹಳ ಶ್ರಮ ಹಾಕಿ ವಿಜಯೇಂದ್ರನ ಪ್ರಯತ್ನದಿಂದ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಈಗ ನಾರಾಯಣಗೌಡರು ಜಿಲ್ಲಾಯಲ್ಲಿ ಮೂರ್ನಾಲ್ಕು ಕ್ಷೇತ್ರ ಗೆಲ್ಲುವ ವಾತಾವರಣ ಸೃಷ್ಟಿ ಮಾಡಿದ್ದಾರೆ. ಹೀಗಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಇಂದು ಸಭೆಯಾಗುತ್ತಿದೆ ಎಂದು ಬಿಎಸ್‍ವೈ ಹೇಳಿದರು.