ಮಂತ್ರಾಲಯದ ರಾಯರ ಸನ್ನಿದಿಯಲ್ಲಿ 2023ರ ಚುನಾವಣೆ ಕುರಿತು ಭವಿಷ್ಯ ನುಡಿದ ಬಿಎಸ್ವೈ

Social Share

ಮಂತ್ರಾಲಯ,ಆ.11- ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಬೊಮ್ಮಾಯಿ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಗುಸುಗುಸು ಹಬ್ಬಿರುವ ಸಂದರ್ಭದಲ್ಲೇ ಸ್ಪಷ್ಟನೆ ನೀಡಿರುವ ಅವರು ಹಾಲಿ ಮುಖ್ಯಮಂತ್ರಿ ನಾಯಕ್ವದಲ್ಲೇ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ನನಸಾಗುವುದಿಲ್ಲ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. 2022 ಆಗಸ್ಟ್ 21ರಿಂದ ರಾಜ್ಯದ ಎಲ್ಲೆ ಕಡೆ ಪ್ರವಾಸ ಹಮ್ಮಿಕೊಳ್ಳಲಾಗುವುದು. ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಹುಡುಕಿ ಕೆಲಸ ಮಾಡಲು ಹೈಕಮಾಂಡ್ ಸೂಚನೆ ನೀಡಿದ್ದು, ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

ಇತ್ತೀಚಿಗೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಜತೆ ಚರ್ಚೆ ವೇಳೆ ರಾಜ್ಯ ರಾಜಕೀಯ ವಿದ್ಯಮಾನದ ಕುರಿತು ವಿಷಯ ಮಂಡನೆ ಮಾಡಲಾಗಿದೆ. ಸಾಮೂಹಿಕ ನೇತೃತ್ವದಲ್ಲೇ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು. ನಾನು ರಾಜೀನಾಮೆ ಕೊಟ್ಟ ನಂತರವೇ ಸಿಎಂ ಆಯ್ಕೆ ಆಗಿದೆ. ನನಗೆ ಪಕ್ಷ ಎಲ್ಲ ರೀತಿಯ ಗೌರವ ನೀಡಿದೆ. ಪಕ್ಷದಿಂದ ನನಗೆ ಅನ್ಯಾಯ ಆಗಿಲ್ಲ. ಆ ಋಣ ತೀರಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಬಿಹಾರದ ಸಿಎಂ ನಿತೀಶ್‍ಕುಮಾರ್ ಅನೇಕ ಸಲ ಮೈತ್ರಿ ಮಾಡಿಕೊಂಡು ನಂತರ ಕೈ ಬಿಟ್ಟಿದ್ದಾರೆ. ಈ ರೀತಿಯ ವಿದ್ಯಮಾನಗಳಿಂದ ಪಕ್ಷಕ್ಕೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಆಗದು. ಮುಂದೆಯೂ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಶಿಕಾರಿಪುರದಿಂದ ಪುತ್ರ ವಿಜಯೇಂದ್ರನಿಗೆ ಅವಕಾಶ ನೀಡುವಂತೆ ಕೇಳಿದ್ದೇನೆ. ಕೇಂದ್ರ ಒಪ್ಪಿದರೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆಗೆ ಅವಕಾಶ ಸಿಗಲಿದೆ ಎಂದರು.

ಕಾಂಗ್ರೆಸ್ ಆರೋಪ ಶುದ್ಧ ಸುಳ್ಳು: ಕಾಂಗ್ರೆಸ್ ಪಕ್ಷವು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾಡಿರುವ ಆರೋಪ ಶುದ್ಧ ಸುಳ್ಳು. ಕೆಲವೊಂದು ಸಮಸ್ಯೆಗಳಿದ್ದು ಪರಿಹರಿಸಿಕೊಂಡು ಮುಂದುವರಿಯಲಿದ್ದೇವೆ. ಕೇಂದ್ರ ನಾಯಕರ ತೀರ್ಮಾನದಿಂದಲೇ ಆಯಾ ಜಿಲ್ಲೆಯ ಸಚಿವರನ್ನು ಆಯಾ ಜಿಲ್ಲೆಗಳಿಗೆ ಸಚಿವರಾಗಿ ನೇಮಿಸಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲು ಬಿಜೆಪಿ ಅವಕಾಶ ನೀಡಲ್ಲ ಎಂದು ಸಮರ್ಥಿಸಿಕೊಂಡರು.

ಇಡಿ, ಸಿಐಡಿ ಸೇರಿ ಯಾವುದೇ ತನಿಖಾ ಸಂಸ್ಥೆಯ ಬಗ್ಗೆ ಕಾಂಗ್ರೆಸ್‍ನವರು ಭಯ ಬೀಳಬೇಕಿಲ್ಲ. ತಪ್ಪು ಮಾಡಿರದಿದ್ದರೆ ಕಾಂಗ್ರೆಸ್‍ನವರು ಆತಂಕಪಡಬೇಕಿಲ್ಲ. ಸಂಪುಟ ವಿಸ್ತರಣೆಯ ಮೂಲಕ ಸಿಎಂ ಎಲ್ಲ ಪ್ರದೇಶಕ್ಕೆ ಪ್ರಾಶಸ್ತ್ಯ ನೀಡಲಿದ್ದಾರೆ. ಮನೆ ಮನೆ ರಾಷ್ಟ್ರಧ್ವಜ ಕಾರ್ಯಕ್ರಮಕ್ಕೆ ಟೀಕೆ ಸಲ್ಲದು ಎಂದರು.

ಆ.21 ರಿಂದ ರಾಜ್ಯಾದ್ಯಂತ ಪ್ರವಾಸದ ಬಗ್ಗೆ ಸಭೆ ನಡೆಸಿ ಸ್ಥಳ ಶೀಘ್ರ ನಿಗದಿ ಮಾಡಲಾಗುವುದು ಎಂದರು. ಮಕ್ಕಳಿಗೆ ಹೆಸರಿಟ್ಟ ಪ್ರಸಂಗ ಹೇಳಿದ ಬಿಎಸ್‍ವೈ ನಾನು ಯಾವುದೇ ಕೆಲಸ ಆರಂಭ ಮಾಡುವ ಮುನ್ನ ಗುರು ರಾಘವೇಂದ್ರ ಸ್ಮರಿಸಿ ಮಾಡುವ ಪರಿಪಾಠವಿದೆ.

ಈ ಹಿಂದೆ ನನಗೆ ಸ್ವಪ್ನದಲ್ಲಿ ಬಂದು ರಾಯರು ಅನುಗ್ರಹಿಸಿದ್ದರು. ರಾಯರ ಸ್ವಪ್ನದಲ್ಲಿ ಬಂದ ಮೇಲೆ ದೊಡ್ಡ ಮಗನಿಗೆ ರಾಘವೇಂದ್ರ ಎಂದು ಹೆಸರಿಡಲಾಗಿತ್ತು. ಮಂತ್ರಾಲಯದ ವಿಜಯತೀರ್ಥದಲ್ಲಿ ಪತ್ನಿ ಸಮೇತ ಕೆಲ ದಿನ ತಂಗಿದ್ದೆ. ಅದಾದ ಮೇಲೆ ಎರಡನೇ ಮಗ ಜನಿಸಿದ್ದರಿಂದ ವಿಜಯೇಂದ್ರ ಎಂದು ಹೆಸರಿಡಲಾಗಿತ್ತು. ಗುರುಗಳ ಆರಾಧನೆ ಶುಭ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಬಂದಿರುವುದು ಬಹಳ ಖುಷಿ ಕೊಟ್ಟಿದೆ ಎಂದರು.

Articles You Might Like

Share This Article