ಲೋಕಸಭೆ ಚುನಾವಣೆ ಮುಗಿಯುವವರೆಗೂ ಯಡಿಯೂರಪ್ಪನವರೇ ಬಿಜೆಪಿ ರಾಜ್ಯಾಧ್ಯಕ್ಷ

Yadiyurappa--01

ಬೆಂಗಳೂರು, ಜೂ.4-ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನೇ ಮುಂದುವರೆಸಲು ಕೇಂದ್ರ ನಾಯಕರು ಸಮ್ಮತಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರಗಳು ಕೂಡ ನಿರ್ಣಾಯಕ ಪಾತ್ರ ವಹಿಸಲಿವೆ. ರಾಜ್ಯದಲ್ಲಿರುವ ಲಿಂಗಾಯಿತ ಸಮುದಾಯ ಬಿಜೆಪಿ ಜೊತೆ ಇರುವುದು ವಿಧಾನಸಭೆ ಚುನಾವಣೆಯ ಫಲಿತಾಂಶದಿಂದಲೇ ಸ್ಪಷ್ಟವಾಗಿದೆ. ಆ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪನವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದೆ ಲೋಕಸಭೆಯ ಒಟ್ಟು 28 ಕ್ಷೇತ್ರಗಳ ಪೈಕಿ 15ರಿಂದ 18 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ.

ಯಡಿಯೂರಪ್ಪನವರ ಮೇಲೆ ವೈಯಕ್ತಿಕವಾಗಿ ಎಷ್ಟೇ ಆರೋಪ, ಪ್ರತ್ಯಾರೋಪಗಳಿದ್ದರೂ ಅವರು ಪ್ರತಿನಿಧಿಸುವ ಸಮುದಾಯ ಮಾತ್ರ ಅವರ ಜೊತೆ ಇರುವ ಕಾರಣ ಅಧ್ಯಕ್ಷ ಸ್ಥಾನವನ್ನು ಬದಲಾಯಿಸದೆ ಅವರಿಗೆ ಮಣೆ ಹಾಕಲು ಹೈಕಮಾಂಡ್ ಕಾರ್ಯತಂತ್ರ ರೂಪಿಸಿದೆ. ಒಂದು ವೇಳೆ ತಕ್ಷಣವೇ ಅಧ್ಯಕ್ಷ ಸ್ಥಾನ ಬದಲಾಯಿಸಿದರೆ ಸಾಕಷ್ಟು ವ್ಯತ್ಯಾಸಗಳಾಗುವ ಸಾಧ್ಯತೆಗಳಿರುವುದರಿಂದ ಪಕ್ಷದಲ್ಲಿ ಭಿನ್ನಮತಕ್ಕೆ ಅವಕಾಶ ನೀಡದೆ ಬಿಎಸ್‍ವೈ ಅವರನ್ನೇ ಮುಂದೆ ಬಿಡಲು ಬಿಜೆಪಿ ಸಜ್ಜಾಗಿದೆ.

ಬಿಎಸ್‍ವೈ ಸೂಚಿಸಿದವರಿಗೇ ಟಿಕೆಟ್:
ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಯಾವ ಅಭ್ಯರ್ಥಿಗಳಿಗೆ ಟಿಕೆಟ್ ಸೂಚಿಸುತ್ತಾರೋ ಅವರಿಗೇ ಮಣೆ ಹಾಕಲು ಹೈಕಮಾಂಡ್ ಸೂಚಿಸಿದೆ.  ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆ ವೇಳೆ ಹಲವರ ವಿರೋಧ ಕಟ್ಟಿಕೊಂಡು ಯಡಿಯೂರಪ್ಪ ಹೇಳಿದವರಿಗೆ ಟಿಕೆಟ್ ನೀಡಲಾಗಿತ್ತು. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂದು ಹೇಳಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದ ಯಡಿಯೂರಪ್ಪ ತಮ್ಮ ಬೆಂಬಲಿಗರನ್ನು ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಅಷ್ಟರಮಟ್ಟಿಗೆ ರಾಜ್ಯದಲ್ಲಿ ಈಗಲೂ ಯಡಿಯೂರಪ್ಪನವರ ಅಲೆ ಇದೆ ಎಂಬುದು ಫಲಿತಾಂಶದಿಂದಲೇ ಸಾಬೀತಾಗಿತ್ತು. ಈಗ ಲೋಕಸಭೆ ಚುನಾವಣೆಯಲ್ಲೂ ಅವರ ಜನಪ್ರಿಯತೆಯನ್ನೇ ಲಾಭ ಮಾಡಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರ ಮಾತೇ ಅಂತಿಮ ಎಂಬುದಕ್ಕೆ ನಿನ್ನೆಯಷ್ಟೇ ತುಮಕೂರಿನಲ್ಲಿ ಮಾಜಿ ಸಂಸದ ಜಿ.ಎಚ್.ಬಸವರಾಜ್ ಅವರನ್ನು ಮುಂದಿನ ಚುನಾವಣೆಗೆ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

ಸದ್ಯದಲ್ಲೇ ನಡೆಯಲಿರುವ ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯಡಿಯೂರಪ್ಪ ಸೂಚಿಸಿದ ಅಭ್ಯರ್ಥಿಗಳಿಗೆ ಯಡಿಯೂರಪ್ಪ ಸೂಚಿಸಿದ ಅಭ್ಯರ್ಥಿಗಳಿಗೆ ಮರು ಮಾತನಾಡದೆ ಹೈಕಮಾಂಡ್ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಪಕ್ಷದಲ್ಲಿ ಬಿಎಸ್‍ವೈ ಮಾತೇ ಅಂತಿಮ ಎನ್ನುವುದಕ್ಕೆ ಇತೀಚೆಗೆ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿ ಮತ್ತೊಂದು ನಿದರ್ಶನವಾಗಿದೆ. ಎಷ್ಟೇ ವಿರೋಧವಿದ್ದರೂ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು. ಇನ್ನು ರಾಜ್ಯದಲ್ಲಿ 2ನೇ ಹಂತದ ನಾಯಕರು ಬಿಎಸ್‍ವೈ ಮಾತಿಗೆ ವಿರೋಧಿಸದೆ ಹೊಂದಿಕೊಂಡು ಹೋಗಬೇಕೆಂದು ಸೂಚಿಸಲಾಗಿದೆ.

Sri Raghav

Admin