ಯಡಿಯೂರಪ್ಪರ ಬಹಿರಂಗ ಹೇಳಿಕೆಯಿಂದ ಸರ್ಕಾರದ ಆಡಳಿತ ವ್ಯವಸ್ಥೆ ದರ್ಬಲಗೊಂಡಿದೆ : ಎಚ್‌ಡಿಕೆ

ಬೆಂಗಳೂರು, ಜೂ. 7- ಪಕ್ಷದ ಹೈಕಮಾಂಡ್ ಹೇಳಿದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಹಿರಂಗವಾಗಿ ನೀಡಿರುವ ಹೇಳಿಕೆಯಿಂದ ಸರ್ಕಾರದ ಆಡಳಿತ ವ್ಯವಸ್ಥೆ ಮತ್ತಷ್ಟು ದರ್ಬಲಗೊಂಡು ರಾಜ್ಯದ ಜನರು ಕಷ್ಟ ಅನುಭವಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಾಯಕತ್ವ ಬದಲಾವಣೆ ವಿಚಾರ ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು, ನಾಲ್ಕುಗೋಡೆಗಳ ನಡುವೆ ಬಗೆಹರಿಸಿಕೊಳ್ಳಬೇಕೇ ಹೊರತು, ಮುಖ್ಯಮಂತ್ರಿಯಾದವರು ಸಾರ್ವಜನಿಕವಾಗಿ ರಾಜೀನಾಮೆ ವಿಚಾರ ಪ್ರಸ್ತಾಪಿಸಬಾರದು. ಸರ್ಕಾರದ ದೌರ್ಬಲ್ಯ ಗೊತ್ತಾದರೆ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ‌.

ರಾಜ್ಯದಲ್ಲಿ ಆಡಳಿತ ಪ್ರತಿದಿನವೂ ವೈಫಲ್ಯ ಕಾಣುತ್ತಿದೆ. ಅಧಿಕಾರಿಗಳು ಮೊದಲೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿ ಎಷ್ಟು ದಿನ ಇರುತ್ತಾರೋ ಏನೋ? ಎಂಬಂತೆ ಮಂತ್ರಿ ಮಂಡಲವನ್ನು ಲೆಕ್ಕಕ್ಕೆ ಇಡುವುದಿಲ್ಲ ಎಂದಿದ್ದಾರೆ.

ಆರೇಳು ತಿಂಗಳಿನಿಂದಲೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪವಾಗುತ್ತಿದೆ. ಈಗಾಗಲೇ ಸರ್ಕಾರದ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಇದೆ. ಇಂತಹ ಪರಿಸ್ಥಿಯಲ್ಲಿ ಅಧಿಕಾರಿಗಳು ಯಾರನ್ನು ಲೆಕ್ಕಕ್ಕೆ ಇಡುವುದಿಲ್ಲ. ಜನರ ಕಷ್ಟ-ಸುಖ ಕೇಳುವವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ‌.
ಇದೇ ಮುಖ್ಯಮಂತ್ರಿ ಮುಂದುವರೆದರೂ ಅಷ್ಟೇ. ಹೊಸ ಮುಖ್ಯಮಂತ್ರಿ ಬಂದರೂ ಅಷ್ಟೇ. ಜನರಿಗೆ ಈ ಸರ್ಕಾರದಲ್ಲಿ ಅನುಕೂಲವಾಗುವುದಿಲ್ಲ. ಹಣದ ಹೂಡಿಕೆಯ ಮೇಲೆ ಅಧಿಕಾರಕ್ಕೆ ಬಂದಿರುವ ಸರ್ಕಾರದಲ್ಲಿ ಅತೀ ಶೀಘ್ರವಾಗಿ ಹಣ ಸಂಪಾದನೆ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೆಚ್.ಡಿ.ಕೆ‌.ಆರೋಪಿಸಿದ್ದಾರೆ.

ಯಾವ ರೀತಿ ಸರ್ಕಾರ ನಡೆಯುತ್ತಿದೆ ಎಂಬುದನ್ನು ರಾಜಕಾರಣದ ಕನಿಷ್ಠ ಜ್ಞಾನವುಳ್ಳವರಿಗೂ ಗೊತ್ತಿದೆ. ಬುದ್ದಿವಂತಿಕೆಯಿಂದ ಕೆಲಸ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಅಥವಾ ನಾಯಕರು ಅನಿವಾರ್ಯವಲ್ಲ. ಯಾವುದೇ ಪಕ್ಷವಿದ್ದರೂ ಹೊಸ ನಾಯಕರು ಸೃಷ್ಟಿಯಾಗುತ್ತಾರೆ. ಆದರೆ, ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಗಂಭೀರ ಚಿಂತನೆ ಮಾಡಬೇಕು ಎಂದು ಅವರು ಹೇಳಿದ್ದಾರೆ.