ಬೆಂಗಳೂರು,ಜು.23- ಸದಾ ಒಂದಲ್ಲೊಂದು ಕಾರಣಕ್ಕಾಗಿ ರಾಜ್ಯ ರಾಜಕಾರಣದ ಕೇಂದ್ರಬಿಂದು ವಾಗುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಠತ್ ನಿರ್ಧಾರ ಅಭಿಮಾನಿಗಳಿಗೆ ಮಾತ್ರವಲ್ಲದೆ ಸ್ವತಃ ಕೇಂದ್ರ ಬಿಜೆಪಿ ವರಿಷ್ಠರನ್ನು ಅಡಕತ್ತರಿಗೆ ಸಿಲುಕುವಂತೆ ಮಾಡಿದೆ.
ಏಕೆಂದರೆ ಯಡಿಯೂರಪ್ಪ ಉರುಳಿಸಿರುವ ರಾಜಕೀಯ ದಾಳ ಕೇವಲ ಎದುರಾಳಿಗಳನ್ನು ಹುಬ್ಬುರೇವಂತೆ ಮಾಡಿರುವುದಲ್ಲದೆ ಪಕ್ಷದ ವರಿಷ್ಠರಿಗೂ ಕೂಡ ಕಗ್ಗಂಟಾಗಿ ಪರಿಣಮಿಸಿದೆ. ಈಗ ವರಿಷ್ಠರು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬೇಕಾದರೆ ಸಾಕಷ್ಟು ಅಳೆದು ತೂಗಿ ಮುಂದಡಿ ಇಡಬೇಕಾಗುತ್ತದೆ. ಹೆಚ್ಚು ಕಮ್ಮಿಯಾದರೆ ಕರ್ನಾಟಕದಲ್ಲಿ ಬಿಜೆಪಿಗೆ 2018ರ ಫಲಿತಾಂಶ ಮರು ಕಳಿಸಲಿದೆ ಎಂಬ ಆತಂಕ ಶುರುವಾಗಿದೆ.
ಹೀಗಾಗಿ ಯಡಿಯೂರಪ್ಪನವರ ರಾಜಕೀಯ ನಿರ್ಧಾರಕ್ಕೆ ಅಸಮ್ಮತಿಯನ್ನೂ ಸೂಚಿಸದೆ, ಇಲ್ಲವೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡದೆ ಎಚ್ಚರಿಕೆಯ ಹೆಜ್ಜೆ ಇಡಲು ಪಕ್ಷ ಮುಂದಾಗಿದೆ. ಯಡಿಯೂರಪ್ಪನವರು ತಮ್ಮ ಕರ್ಮಭೂಮಿ ಶಿಕಾರಿಪುರದಿಂದ ಪುತ್ರ ವಿಜಯೇಂದ್ರ ಅವರೇ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಿರುವುದು ವರಿಷ್ಠರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಒಂದು ವೇಳೆ ಪುತ್ರನಿಗೆ ಟಿಕೆಟ್ ಕಡೆಗಣಿಸಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕರ್ನಾಟಕದಲ್ಲಿ ಬಿಎಸ್‍ವೈಗೆ ಸರಿಸಮನಾಗಿ ಪಕ್ಷ ಬೆಳೆಸಿದ್ದ ದಿ.ಅನಂತಕುಮಾರ್ ಕುಟುಂಬಕ್ಕೆ ಟಿಕೆಟ್ ನಿರಾಕರಿಸಿರುವಾಗ ಯಡಿಯೂರಪ್ಪನವರ ಕುಟುಂಬಕ್ಕೂ ಇದು ಅನ್ವಯವಾಗುತ್ತದೆ ಎಂಬ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ.
ಕಾರಣ ಬಿಜೆಪಿಗೆ ಪ್ರಬಲವಾಗಿ ನಿಂತಿರುವ ರಾಜ್ಯದ ಅತಿದೊಡ್ಡ ಸಮುದಾಯವಾದ ವೀರಶೈವ ಲಿಂಗಾಯಿತ ಮತಗಳು ಬಿಜೆಪಿಗೆ ಬರುತ್ತಿದೆ ಎಂದರೆ ಅದಕ್ಕೆ ಕಾರಣ ಯಡಿಯೂರಪ್ಪನವರ ನಾಯಕತ್ವ ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ.
ಸದ್ಯಕ್ಕೆ ಬಿಎಸ್‍ವೈ ಅವರ ಸ್ಥಾನವನ್ನು ವಿಜಯೇಂದ್ರ ತುಂಬುವ ಸಾಮಥ್ರ್ಯವಿಲ್ಲದಿದ್ದರೂ ಈಗಾಗಲೇ ಉಪಚುನಾವಣೆ ಸೇರಿದಂತೆ ಮತ್ತಿತರ ಚುನಾವಣೆಯಲ್ಲಿ ತಮ್ಮದೇ ಆದ ಸಾಮಥ್ರ್ಯವನ್ನು ತೋರಿಸಿದ್ದಾರೆ. ಹೀಗಾಗಿ ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಹೈಕಮಾಂಡ್ ಸಾಕಷ್ಟು ಮುಂದಾಲೋಚಿಸಿಯೇ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ.
ಯಡಿಯೂರಪ್ಪನವರ ಈ ನಡೆಯ ಹಿಂದೆ ಹೈಕಮಾಂಡ್‍ನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರವೂ ಇದೆ ಎಂಬುವುದನ್ನು ಅಲ್ಲಗಳೆಯುವ ಹಾಗಿಲ್ಲ. ಸಿಎಂ ಸ್ಥಾನ ಕಳೆದುಕೊಂಡರೂ ಪುತ್ರ ವಿಜಯೇಂದ್ರನಿಗೆ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡಲು ಯಡಿಯೂರಪ್ಪ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಅದ್ಯಾವುದಕ್ಕೂ ಹೈಕಮಾಂಡ್ ಮಣೆ ಹಾಕಿರಲಿಲ್ಲ.
ಬಳಿಕ ನಡೆದಿದ್ದ ಉಪಚುನಾವಣೆಗಳಲ್ಲಿ ವಿಜಯೇಂದ್ರ ಹೆಸರು ಹರಿದಾಡತೊಡಗಿತ್ತು. ಅಲ್ಲೂ ಯಶಸ್ಸು ಸಿಕ್ಕಿರಲಿಲ್ಲ. ಬಳಿಕ ವಿಧಾನಪರಿಷತ್ ಚನಾವಣೆಯಲ್ಲೂ ವಿಜಯೇಂದ್ರಗೆ ಟಿಕೆಟ್ ನೀಡಲಾಗುತ್ತದೆ. ಈ ಮೂಲಕ ಸಂಪುಟಕ್ಕೆ ಸೇರ್ಪಡೆ ಮಾಡಲಾಗುತ್ತದೆ ಎಂಬ ವದಂತಿಯೂ ಹರಿದಾಡಿತ್ತು.
ಅದೂ ಸುಳ್ಳಾಯಿತು. ಒಟ್ಟಿನಲ್ಲಿ ಶಾಸನ ಸಭೆಗೆ ಮಗನನ್ನು ಕರೆತರುವ ಯಡಿಯೂರಪ್ಪ ಅವರ ಪ್ರಯತ್ನವೆಲ್ಲವೂ ವಿಫಲವಾಗುತ್ತಾ ಬಂದಿತ್ತು. ಇದೀಗ ಯಡಿಯೂರಪ್ಪ ತಮ್ಮ ಕ್ಷೇತ್ರವನ್ನೇ ಪುತ್ರನಿಗಾಗಿ ತ್ಯಾಗ ಮಾಡುವ ಮೂಲಕ, ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದುಕೊಂಡರೂ ಹೊಸ ದಾಳವೊಂದನ್ನು ಉರುಳಿಸಿದ್ದಾರೆ. ಈ ಮೂಲಕ ಹೈಕಮಾಂಡ್‍ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಧರ್ಮ ಸಂಕಟದಲ್ಲಿ ಹೈಕಮಾಂಡ್:
ಸಹಜವಾಗಿ ಬಿಜೆಪಿಯಲ್ಲಿ ಇಂತಹದೊಂದು ಸಂಪ್ರದಾಯ ಚಾಲ್ತಿಯಲ್ಲಿಲ್ಲ. ಟಿಕೆಟ್ ಘೋಷಣೆ ಸಂಪೂರ್ಣವಾಗಿ ಹೈಕಮಾಂಡ್ ಕೈಯಲ್ಲಿರುತ್ತದೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ಕೊಡಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ.
ಅದರಲ್ಲೂ ಇನ್ನೂ ಚುನಾವಣೆಗೆ ಒಂಬತ್ತು ತಿಂಗಳು ಬಾಕಿ ಇರುವಾಗಲೇ ಯಡಿಯೂರಪ್ಪ ಶಿಕಾರಿಪುರದ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರ ಈ ನಿರ್ಧಾರವನ್ನು ಹೈಕಮಾಂಡ್ ನಿರಾಕರಿಸುವ ಹಾಗಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಕುಟುಂಬ ರಾಜಕಾರಣದ ಬಗ್ಗೆ ಸದಾ ಧ್ವನಿ ಎತ್ತುವ ಬಿಜೆಪಿ ಹಿರಿಯ ನಾಯಕರು ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಯಡಿಯೂರಪ್ಪ ಅವರ ಒಬ್ಬ ಪುತ್ರ ಸಂಸದರಾಗಿದ್ದಾರೆ. ಇದೀಗ ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧೆ ನಡೆಸುವ ಘೋಷಣೆ ಆಗಿದೆ. ಇಂತಹ ಸಂದರ್ಭದಲ್ಲಿ ಪಕ್ಷ ಹಾಗೂ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಳ್ಳದೆ ಇರಬೇಕಾದ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಮಗನ ರಾಜಕೀಯ ಭವಿಷ್ಯಕ್ಕೆ ಅಡ್ಡಿ ಉಂಟುಮಾಡುತ್ತಾರೆ ಎಂದಾದಾಗ ಯಡಿಯೂರಪ್ಪನವರಿಂದ ಬಂಡಾಯ ಅಥವಾ ಅಸಹಕಾರವನ್ನು ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುವುದು ಕೂಡ ಮುಖ್ಯವಾಗಿದೆ.