ಬೆಂಗಳೂರು,ಜು.22-ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದ ಬಿ.ವೈ.ವಿಜಯೇಂದ್ರ ಸ್ರ್ಪಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪುತ್ರ ವಿಜಯೇಂದ್ರ ಮೈಸೂರಿನ ವರುಣ ಕ್ಷೇತ್ರದಿಂದ ಸ್ರ್ಪಧಿಸುವುದಿಲ್ಲ. ಬದಲಾಗಿ ನನ್ನ ಸ್ವ ಕ್ಷೇತ್ರ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳುವ ಮೂಲಕ ಹಲವು ರಾಜಕೀಯ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಬಿಜೆಪಿ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ಮೊದಲು ನಡೆದ ಹಲವು ವಿಧಾನಸಭೆ ಚುನಾವಣೆಯ ನೇತೃತ್ವ ವಹಿಸಿದ್ದ ಅವರು, ಬಿಜೆಪಿ ಗೆಲುವಿನ ರೂವಾರಿಯಾಗಿದ್ದರು. ಅವರ ಶಾಸನ ಸಭೆಯ ಪ್ರವೇಶದ ಬಗ್ಗೆ ಹಲವು ಚರ್ಚೆಗಳು, ಪ್ರಶ್ನೆಗಳು ಹೇಳಿ ಬಂದಿದ್ದವು. ವಿಧಾನಪರಿಷತ್‍ಗೆ ವಿಜಯೇಂದ್ರ ಪ್ರವೇಶಿಸುತ್ತಾರೆ ಎಂಬ ವದಂತಿಗಳು ಹರಿದಾಡಿದ್ದವು.
ಈಗ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ಯಡಿಯೂರಪ್ಪ ಅವರು, ತಮ್ಮ ಪುತ್ರ ವಿಜಯೇಂದ್ರ ಶಿಕಾರಿಪುರದಿಂದಲೇ ಕಣಕ್ಕಿಳಿಯುತ್ತಾರೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ಶಿಕಾರಿಪುರ ಯಡಿಯೂರಪ್ಪ ಅವರ ರಾಜಕೀಯ ಕರ್ಮ ಭೂಮಿ. ಅಲ್ಲಿಂದ ವಿಜಯೇಂದ್ರ ಸ್ರ್ಪಧಿಸಿದ್ದೇ ಆದರೆ, ಯಡಿಯೂರಪ್ಪ ಎಲ್ಲಿಂದ ಸ್ರ್ಪಧಿಸಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಸ್ರ್ಪಧಿಸಲ್ಲ ಎಂಬ ಮಾತ್ರಕ್ಕೆ ರಾಜಕೀಯ ನಿವೃತ್ತಿಯಲ್ಲ. ಅಂತಹ ಪ್ರಶ್ನೆಯೇ ಉದ್ಬವಿಸಲ್ಲ. ನಮ್ಮ ತಂದೆಯವರ ತೀರ್ಮಾನವನ್ನು ಪಾಲಿಸಲೇಬೇಕು ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ನೇರವಾಗಿ ವಿಪಕ್ಷಗಳಿಗೆ ಯಡಿಯೂರಪ್ಪ ಅವರು ಸವಾಲು ಹಾಕಿದ್ದಾರೆ. ಬಿಜೆಪಿಯನ್ನು ಸಂಘಟಿಸುವ ಕಾರ್ಯದಲ್ಲಿ ಅವರು ಸಕ್ರಿಯವಾಗಿ ತೊಡಗುತ್ತಾರೆ. ನಿವೃತ್ತಿ ಎಂಬುದು ಅವರ ಡಿಕ್ಷನರಿಯಲ್ಲೇ ಇಲ್ಲ ಎಂದು ತಿಳಿಸಿದ್ದಾರೆ.