ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರ ಕಡಿಮೆಯಾಗಲಿದೆ : ಮೋದಿ

Social Share

ಬೆಂಗಳೂರು,ನ.16- ದೇಶಾದ್ಯಂತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ 100 ಟ್ರಿಲಿಯನ್ ಡಾಲರ್ನಷ್ಟು ಅಗಾಧ ಮೊತ್ತವನ್ನು ಹೂಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ನ 25ನೇ ಆವೃತ್ತಿಯನ್ನು ವಚ್ರ್ಯುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, , ತಂತ್ರಜ್ಞಾನಕ್ಕೆ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಸ್ಪರ್ಶವನ್ನು ನೀಡುತ್ತಲೇ ಇರುವುದು ಭಾರತದ ಅನನ್ಯ ಸಾಧನೆಯಾಗಿದೆ. ಅದರಲ್ಲೂ ತಂತ್ರಜ್ಞಾನವು ನಮಗೆ ಬಡತನದ ವಿರುದ್ಧದ ಹೋರಾಟಕ್ಕೆ ಶಕ್ತಿಶಾಲಿ ಅಸ್ತ್ರವಾಗಿದೆ ಎಂದರು.

ದೇಶದಲ್ಲಿ ಬಂಡವಾಳ ಹೂಡಿಕೆದಾರರ ಪಾಲಿಗೆ ಹಿಂದಿನ ಕೆಂಪುಪಟ್ಟಿಯ ಸಮಸ್ಯೆ ಕೊನೆಗೊಂಡಿದ್ದು, ಈಗ ರತ್ನಗಂಬಳಿಯ ಸ್ವಾಗತವಿದೆ. ಅದರಲ್ಲೂ ಬೆಂಗಳೂರು ತಂತ್ರಜ್ಞಾನ, ನಾವೀನ್ಯತೆ ಮತ್ತು ಸಮರ್ಥ ನಾಯಕತ್ವದ ತವರಾಗಿದೆ ಎಂದು ಬಣ್ಣಿಸಿದರು.

ಭಾರತದಲ್ಲಿ 81 ಸಾವಿರ ನವೋದ್ಯಮಗಳಿದ್ದು, ಯೂನಿಕಾರ್ನ್ಗಳಲ್ಲಿ ಪ್ರಪಂಚದ 3ನೇ ಅತಿದೊಡ್ಡ ಹಬ್ ಆಗಿದೆ. ಜತೆಗೆ, ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನವು ಕಳೆದ ಎಂಟು ವರ್ಷಗಳಲ್ಲಿ 40 ಸ್ಥಾನಗಳಷ್ಟು ಮೇಲಕ್ಕೆ ಜಿಗಿದಿದೆ ಎಂದರು.

ಹೂಡಿಕೆದಾರರ ನಂಬಿಕೆ ಮತ್ತು ದೇಶದಲ್ಲಿರುವ ತಂತ್ರಜ್ಞಾನದ ಶಕ್ತಿ ಎರಡೂ ಸೇರಿದರೆ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಾಗಲಿದೆ. ಇದು ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲಕರವಾಗಿದ್ದು, ದೊಡ್ಡ ಗ್ರಾಹಕರನ್ನು ಸೃಷ್ಟಿಸಿದೆ ಎಂದು ಹೇಳಿದರು.

ಇತ್ತೀಚೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನವನ್ನು ವ್ಯಾಪಕ ಬಳಕೆ ಮಾಡುತ್ತಿರುವ ಪರಿಣಾಮ ದೇಶದಲ್ಲಿ ಭ್ರಷ್ಟಾಚಾರದ ಹಾವಳಿ ಕಡಿಮೆಯಾಗಿದೆ ಎಂದರು. ಆರೋಗ್ಯ, ಕೈಗಾರಿಕೆ, ಶಿಕ್ಷಣ, ಕೃಷಿ, ರೈಲ್ವೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಾವು ತಂತ್ರಜ್ಞಾನ ಬಳಕೆ ಮಾಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಮಂಟ್ ಬಳಸಲು ಉತ್ತೇಜನ ನೀಡಲಾಯಿತು. ಪರಿಣಾಮ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ನಮ್ಮ ಡೇಟಾ ದರಗಳು ಪ್ರಪಂಚದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಬಳಕೆಗೆ ಲಭ್ಯವಾಗುತ್ತಿದೆ. ಆರೋಗ್ಯದಿಂದ ಶೈಕ್ಷಣಿಕ ವಲಯದವರೆಗೂ ವ್ಯಾಪಿಸಿದೆ. ಕೋವಿಡ್ ಸಂದರ್ಭದಲ್ಲಿ ಡೇಟಾ ಇಲ್ಲದೇ ಇದ್ದರೂ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡಿದ್ದೇವೆ. ಇದು ತಂತ್ರಜ್ಞಾನದಿಂದ ಸಾಧ್ಯವಾಯಿತು ಎಂದು ವ್ಯಾಖ್ಯಾನಿಸಿದರು.

ಸಿಲಿಕಾನ್ ವ್ಯಾಲಿ ಎಂದೇ ಕರೆಯುವ ಬೆಂಗಳೂರು ಇಂದು ದೇಶದಲ್ಲೇ ತಂತ್ರಜ್ಞಾನದ ತವರೂರಾಗಿದೆ. ಇಲ್ಲಿ ಪ್ರತಿದಿನ ಹೊಸ ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ಇದಕ್ಕಾಗಿ ಯುವಕರ ತಂಡವೇ ಇಲ್ಲಿದೆ ಎಂದು ಶ್ಲಾಘಿಸಿದರು.

ಬೆಂಗಳೂರಿನಲ್ಲಿ ಎಲ್ಲ ಅವಿಷ್ಕಾರ ಸಾಧ್ಯ : ಸಿಎಂ ಬೊಮ್ಮಾಯಿ

ಬೆಂಗಳೂರು ತಂತ್ರಜ್ಞಾನದ ಪ್ರಮುಖ ತಾಣವಾಗಿದ್ದು, ಇದು ಸಂಶೋಧನೆಗೆ ವಿಶ್ವ ವಿಖ್ಯಾತಿ ಪಡೆದ ನಗರ, ಭಾರತದ ಆವಿಷ್ಕಾರ ಸೂಚ್ಯಂಕದಲ್ಲಿ ನಂಬರ್ ಒನ್ ಸ್ಥಾನ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಇನೋವೇಷನ್ ವಿಚಾರದಲ್ಲಿ ಬೆಂಗಳೂರು ಈಗಲೂ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಇನೋವೇಟಿವ್ ಯುವ ಸಮೂಹವಿದೆ. ನಮ್ಮ ದೇಶದ ಯುವ ಸಮೂಹ ಶಕ್ತಿ ಇಡೀ ವಿಶ್ವಕ್ಕೆ ಈಗಾಗಲೇ ಪರಿಚಯವಾಗಿದೆ ಎಂದು ಹಾಡಿ ಹೊಗಳಿದರು.

ಭಾರತದಲ್ಲಿ ತಂತ್ರಜ್ಞಾನವು ಸಮಾನತೆ ಮತ್ತು ಅಭಿವೃದ್ಧಿಯ ಆಧಾರ ಸ್ತಂಭವಾಗಿದೆ. ಆಯುಷ್ಮಾನ್ ಭಾರತ ಜಗತ್ತಿನಲ್ಲೇ ಅತಿ ದೊಡ್ಡ ವಿಮೆ ಯೋಜನೆಯಾಗಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೂ ದೇಶದಲ್ಲಿ ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನ ಕೈಗೊಳ್ಳಲು ಕೂಡ ತಂತ್ರಜ್ಞಾನದ ಪ್ರಗತಿಯಿಂದ ಸಾಧ್ಯವಾಯಿತು ಎಂದರು.

ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಡ್ರೋಣ್ ಮೂಲಕ ಆಸ್ತಿಯ ಮಾಪನ ಮಾಡಲು ಸಾಧ್ಯವಾಗಿದೆ. ಹಣಕಾಸು ಸೇರ್ಪಡೆ ಹೆಚ್ಚಿಸಲೂ ಸುಲಭವಾಗಿದೆ. ಬಡ ಫಲಾನುಭವಿಗಳಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರದ ಯೋಜನೆಗಳ ಸಬ್ಸಿಡಿ ಹಾಗೂ ಹಣಕಾಸು ನೆರವು ನೀಡಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಭಾರತದಲ್ಲಿ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ವಿಸ್ತಾರವಾಗಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ವ್ಯಾಪಾರ ವಹಿವಾಟು ಹೆಚ್ಚಿಸಲು ಸಹಕಾರಿಯಾಗಿದೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ. ಭಾರತದಲ್ಲಿ ಈಗ ರೆಡ್ ಟೇಪ್ಗೆ (ಕೆಂಪು ಪಟ್ಟಿ) ಅವಕಾಶ ಇಲ್ಲ. ಈಗ ಹೂಡಿಕೆದಾರರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗುತ್ತಿದೆ ಎಂದು ಹೇಳಿದರು.

ಆರೋಗ್ಯ, ಹಣಕಾಸು, ಆಡಳಿತ ನಿರ್ವಹಣೆಯಲ್ಲಿ ಯುವ ಭಾರತೀಯರು ಮುಂಚೂಣಿಯಲ್ಲಿ ಇರುವುದನ್ನು ಗಮನಿಸಬಹುದು. ಯುನಿಕಾರ್ನ್ಗಳ ಸಂಖ್ಯೆ 2021ರಿಂದ ಇಮ್ಮಡಿಯಾಗಿದೆ. ನೂರಾರು ವಿದೇಶಿ ಕಂಪನಿಗಳು ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿವೆ. ಮೊಬೈಲ್ ಮತ್ತು ಡೇಟಾ ಕ್ರಾಂತಿಯೇ ದೇಶದಲ್ಲಿ ನಡೆಯುತ್ತಿದೆ. ಬಡತನದ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನದ ಬೆಳವಣಿಗೆ ಪ್ರಮುಖ ಅಸ್ತ್ರವಾಗಿದೆ ಎಂದು ಬಣ್ಣಿಸಿದರು.

ಭಾರತ ಇಂದು ಮೂರನೇ ಅತಿದೊಡ್ಡ ಸ್ಮಾರ್ಟ್ಅಪ್ ದೇಶವಾಗಿದೆ. ಆರ್ ಅಂಡ್ ಡಿ ವಿಚಾರವಾಗಿಯೂ ತುಂಬ ಮುಂದೆ ಬಂದಿದ್ದೇವೆ. ಭಾರತದ ಯುವ ಪೀಳಿಗೆಯು ಮೊಬೈಲ್ ಹಾಗೂ ಡೇಟಾ ಉಪಯೋಗದಿಂದ ಹಲವಾರು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಕಳೆದ 8 ವರ್ಷದಲ್ಲಿ ದ್ವೇಷಾಧಾರಿತ ಭಾಷಣಗಳ ಪ್ರಮಾಣ ಶೇ.500 ರಷ್ಟು ಹೆಚ್ಚಳ

ಬ್ರಾಡ್ಬ್ಯಾಂಡ್ ಸಂಪರ್ಕ 60 ಮಿಲಿಯನ್ನಿಂದ 810 ಮಿಲಿಯನ್ ದಾಟಿದೆ. ಪ್ರಸ್ತುತ ಭಾರತದಲ್ಲಿ ಸ್ಮಾರ್ಟ್ಅಪ್ ಫೋನ್ ಬಳಕೆ 130 ಮಿಲಿಯನ್ನಿಂದ 750 ಮಿಲಿಯನ್ ತಲುಪಿದ್ದೇವೆ. ಇಂಟರ್ನೆಟ್ ಉಪಯೋಗವನ್ನು ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಬಳಸುತ್ತಿದ್ದಾರೆ ಎಂದು ಪ್ರಶಂಸಿದರು.

ಮಾಧ್ಯಮಗಳು ಹಳ್ಳಿಗಳನ್ನು ಇಂದಿಗೂ ತಲುಪಲು ಸಾಧ್ಯವಾಗದಿದ್ದರೂ ತಂತ್ರಜ್ಞಾನ ತಲುಪಿದೆ. ಜಗತ್ತಿನ ಪ್ರತಿಯೊಂದು ವಿಷಯಗಳು ಕೂಡ ಕ್ಷಣಾರ್ಧದಲ್ಲೇ ನಮ್ಮ ಬೆರಳಿನಲ್ಲಿ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಭಾರೀ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಆಸ್ಟ್ರೆಲಿಯಾದ ಸಹಾಯಕ ವಿದೇಶಾಂಗ ಸಚಿವ ಟಿಮ್ ಪ್ಯಾಟ್ಸ್, ಫಿನ್ಲೆಂಡ್ನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೊನ್ಕೊನೆನ್, ಅರಬ್ ಸಂಯುಕ್ತ ಸಂಸ್ಥಾನದ ಸಚಿವ ಒಮರ್ ಬಿನ್ ಸುಲ್ತಾನ್, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್ಟಿಪಿಐನ ಉನ್ನತ ಪ್ರತಿನಿಗಳಾದ ಅರವಿಂದ್ಕುಮಾರ್ ಮತ್ತು ಶೈಲೇಂದ್ರ ತ್ಯಾಗಿ, ವಿಜಯ್ ಚಂದ್ರು, ಜಿತೇಂದ್ರ ಛಡ್ಡಾ, ಕಿಂಡ್ರೆಲ್ ಸಂಸ್ಥಾಪಕ ಮಾರ್ಟಿನ್ ಶ್ರೋಟರ್, ಉದ್ಯಮಿ ನವೀನ್ ತೆವಾರಿ ಉಪಸ್ಥಿತರಿದ್ದರು.

ಉಳಿದಂತೆ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ ವಿ ನಾಯ್ಡು ಇದ್ದರು.

Articles You Might Like

Share This Article