ಕೇಂದ್ರ ಬಜೆಟ್ ಮೇಲೆ ಕರ್ನಾಟಕ ಭಾರೀ ನಿರೀಕ್ಷೆ

Social Share

ಬೆಂಗಳೂರು,ಜ.31- ಕೇಂದ್ರ ಸರ್ಕಾರದ ಬಹುನಿರೀಕ್ಷಿತ 2022-23ನೇ ಸಾಲಿನ ಬಜೆಟ್ ನಾಳೆ ಸಂಸತ್‍ನಲ್ಲಿ ಮಂಡನೆಯಾಗುತ್ತಿದ್ದು, ಈ ಬಾರಿಯ ಆಯ-ವ್ಯಯದಲ್ಲಿ ರಾಜ್ಯಕ್ಕೆ ಬಂಪರ್ ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ. ಚುನಾವಣಾ ವರ್ಷವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಮ್ಮ ಬಜೆಟ್‍ನಲ್ಲಿ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆ ಎಂಬ ಆಶಾಭಾವನೆ ಎಲ್ಲರಲ್ಲಿದೆ.
ಈ ಹಿಂದಿನ ಬಜೆಟ್‍ನಲ್ಲಿ ರಾಜ್ಯಕ್ಕೆ ಬಹಳ ದೊಡ್ಡ ಮಟ್ಟದ ಕೊಡುಗೆಗಳೇನೂ ಕೇಂದ್ರ ಸರ್ಕಾರ ಘೋಷಣೆ ಮಾಡಿರಲಿಲ್ಲ. ಧಾರವಾಡದಲ್ಲಿ ಐಐಟಿ, ಬೆಂಗಳೂರಿನ ಮೆಟ್ರೋ ರೈಲು ವಿಸ್ತರಣೆ, ಬೆಂಗಳೂರು ಮಹಾನಗರಕ್ಕೆ ಹೊರ ವರ್ತೂಲ ರೈಲು, ರಾಯಚೂರಿಗೆ ಐಎಎಂ, ಹೊಸ ರೈಲ್ವೆ ಯೋಜನೆಗಳು ಸೇರಿದಂತೆ ಮತ್ತಿತರ ಯೋಜನೆಗಳನ್ನು ಘೋಷಿಸಲಾಗಿತ್ತು.
2023ರ ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಜೆಟ್‍ನಲ್ಲಿ ಒಂದಿಷ್ಟು ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಸಂಭವವಿದೆ ಎನ್ನಲಾಗುತ್ತಿದೆ. ಆದರೆ ಉತ್ತರಪ್ರದೇಶ, ಉತ್ತರಖಂಡ್, ಪಂಜಾಬ್, ಗೋವಾ, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ಆ ರಾಜ್ಯಗಳಿಗೆ ಯಥೇಚ್ಛವಾಗಿ ಯೋಜನೆಗಳು ಘೋಷಣೆಯಾಗಬಹುದೆಂಬ ಲೆಕ್ಕಾಚಾರವು ಇದೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಬಜೆಟ್ ಮಂಡನೆಯಲ್ಲಿ ಕೆಲವು ಅಮೂಲಾಗ್ರ ಬದಲಾವಣೆ ಮಾಡಿದ್ದಾರೆ. ಸರ್ಕಾರಕ್ಕೆ ಹೊರೆಯಾಗುವ ಇಲ್ಲವೇ ಜನರ ಮೂಗಿಗೆ ತುಪ್ಪ ಸವರುವ ಯೋಜನೆಗಳಿಗೆ ಇತಿಶ್ರೀ ಹಾಡಿದ್ದಾರೆ. ಕಾಲಮಿತಿಯೊಳಗೆ ಅನುಷ್ಠಾನವಾಗುವ ಯೋಜನೆಗಳಿಗೆ ಆದ್ಯತೆ ನೀಡುತ್ತಿರುವ ಎನ್‍ಡಿಎ ಸರ್ಕಾರ ವೋಟ್ ಬ್ಯಾಂಕ್, ಜಾತಿ, ಧರ್ಮ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಣಕಾಸಿನ ಲಭ್ಯತೆ ಹಾಗೂ ನಿಗದಿತ ಅವಯೊಳಗೆ ಯೋಜನೆಗಳ ಅನುಷ್ಠಾನಕ್ಕೆ ಮಣೆ ಹಾಕುತ್ತಿದೆ.
ಪ್ರತಿ ಬಾರಿ ಬಜೆಟ್ ಮಂಡಿಸುವ ವೇಳೆ ಆಯಾ ರಾಜ್ಯಗಳ ಬೇಕು-ಬೇಡಿಕೆಗಳ ಪಟ್ಟಿಯನ್ನು ಕೇಳುವುದು ವಾಡಿಕೆ. ಈಗ ಮೋದಿ ಸರ್ಕಾರ ಇದಕ್ಕೂ ಕೂಡ ಪೂರ್ಣ ವಿರಾಮ ಹಾಕಿದೆ. ಹೀಗಾಗಿ ರಾಜ್ಯಕ್ಕೆ ನಾಳಿನ ಬಜೆಟ್‍ನಲ್ಲಿ ಯಾವೆಲ್ಲ ಕೊಡುಗೆಗಳು ಸಿಗಬಹುದೆಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ರಾಜ್ಯದ ಬೇಡಿಕೆಗಳೇನು?:
ಒಂದೆಡೆ ವಿಧಾನಸಭೆ ಚುನಾವಣೆಯ ಹಿನ್ನೆಲೆ ಜನಪ್ರಿಯ ರಾಜ್ಯ ಬಜೆಟ್ ಮಂಡಿಸುವ ಅನಿವಾರ್ಯತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾರ್ಚ್ ಮೊದಲ ವಾರದಲ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕರ್ನಾಟಕ ಕೃಷ್ಣಾ ಮೇಲ್ದಂಡೆ ಯೋಜನೆ-3 ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಗಳಿಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡುವ ಬೇಡಿಕೆ ಇಟ್ಟಿದೆ. ಈ ಸ್ಥಾನಮಾನ ಸಿಕ್ಕರೆ ಯೋಜನಾ ವೆಚ್ಚದ ಶೇ.90ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಭರಿಸಲಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ 3ಕ್ಕೆ 51,148 ಕೋಟಿ ರೂ. ವೆಚ್ಚವಾಗಲಿದ್ದು, ಉತ್ತರ ಕರ್ನಾಟಕದ 7 ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ನೀರಾವರಿಯೇತರ ಭೂಮಿಗೆ ನೀರು ಒದಗಿಸಲಿದೆ. ಈ ಯೋಜನೆಯಿಂದ ಸುಮಾರು 1,21,90,982 ಜನರಿಗೆ ಅನುಕೂಲವಾಗಲಿದೆ.
ಅದೇ ರೀತಿ ಎತ್ತಿನಹೊಳೆ ಯೋಜನೆಗೆ 12,912 ಕೋಟಿ ರೂ. ವೆಚ್ಚವಾಗಲಿದ್ದು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಿದೆ. ಈ ಎರಡೂ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲು ಈಗಾಗಲೇ ಕೇಂದ್ರಕ್ಕೆ ಬೇಡಿಕೆ ಇಡಲಾಗಿದೆ.
ರೈಲ್ವೆ ಯೋಜನೆಗಳಿಗೆ ಹೆಚ್ಚುವರಿ ಅನುದಾನ: ರಾಜ್ಯದ ರೈಲ್ವೆ ಯೋಜನೆಗಳಿಗೆ ಅಗತ್ಯ ಅನುದಾನ ಸಿಗುತ್ತಿಲ್ಲ. ಹೀಗಾಗಿ ಚಾಲ್ತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ. ಪ್ರಮುಖವಾಗಿ ಕಲಬುರಗಿಯಲ್ಲಿ ಹೊಸ ರೈಲ್ವೆ ವಿಭಾಗೀಯ ಕಚೇರಿ ತೆರೆಯಲು ಬೇಡಿಕೆ ಇಟ್ಟಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯಡಿ ಯಾದಗಿರಿ, ಬೀದರ್, ರಾಯಚೂರು ರೈಲ್ವೆ ಯೋಜನೆಗಳನ್ನು ವಿಲೀನ ಮಾಡುವಂತೆ ಕೋರಲಾಗಿದೆ.
ಮಂಗಳೂರು ನಗರ ರೈಲ್ವೆ ಯೋಜನೆ ಹಾಗೂ ಕಲಬುರಗಿ ವಿಭಾಗದ ಯೋಜನೆಗಳನ್ನು ನೈರುತ್ಯ ರೈಲ್ವೆ ವಿಭಾಗದ ವ್ಯಾಪ್ತಿಗೆ ತರಲು ಈಗಾಗಲೇ ಮನವಿ ಮಾಡಲಾಗಿದೆ. ಜೊತೆಗೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬೇಡಿಕೆ ಇಟ್ಟಿದೆ.
ಅದೇ ರೀತಿ ಕರ್ನಾಟಕ ಉದ್ದನೆಯ ಕರಾವಳಿ ತೀರ ಹೊಂದಿದ್ದು, ಬೃಹತ್ ಮತ್ತು ಸಣ್ಣ ಬಂದರು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶ ಇದೆ. ಹೀಗಾಗಿ ಹೊಸ ನೀತಿ ರೂಪಿಸಿ ರಾಜ್ಯದಲ್ಲಿ ಬಂದರು ಅಭಿವೃದ್ಧಿಗಾಗಿ ಖಾಸಗಿ ಹೂಡಿಕೆಗೆ ಅವಕಾಶ ನೀಡಲು ಅನುವು ಮಾಡಿಕೊಡುವಂತೆ ಕೋರಲಾಗಿದೆ.
ಕೇಂದ್ರ ಸರ್ಕಾರದ ವಸತಿ, ನೀರು ಸರಬರಾಜು, ಶಿಕ್ಷಣ ಮತ್ತು ಆರೋಗ್ಯ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆಯಲ್ಲಿದೆ. ಕನಿಷ್ಠ ಬೆಂಬಲ ಬೆಲೆಯಡಿ ಕೇಂದ್ರದಿಂದ ಕರ್ನಾಟಕಕ್ಕೆ ಸುಮಾರು 3,000 ಕೋಟಿ ರೂ. ಬಾಕಿ ಉಳಿದಿಕೊಂಡಿದೆ. ಹೀಗಾಗಿ ಈ ಮೊತ್ತವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
ಬೆಂಗಳೂರಿಗೆ ಹೆಚ್ಚಿನ ಅನುದಾನದ ನಿರೀಕ್ಷೆ:
ದೇಶದ ಆರ್ಥಿಕತೆಗೆ ಬೆಂಗಳೂರು ಬಹು ದೊಡ್ಡ ಕೊಡುಗೆ ನೀಡುತ್ತಿರುವುದರಿಂದ, ಬೆಂಗಳೂರು ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಈಗಾಗಲೇ ಕೋರಲಾಗಿದೆ. ಮೆಟ್ರೋ ರೈಲು ಯೋಜನೆ, ಸಬ್ ಅರ್ಬನ್ ರೈಲು ಯೋಜನೆ, ನಗರ ರಸ್ತೆ ಸಾರಿಗೆ ನಿಗಮಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ.

Articles You Might Like

Share This Article