ನವದೆಹಲಿ,ಫೆ.1- ಈ ಬಾರಿಯ ಬಜೆಟ್‍ನಲ್ಲಿ ಸಪ್ತ ಋಷಿ ಮಂತ್ರ ಪಠಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಮುಖವಾಗಿ ಏಳು ವಲಯಗಳಿಗೆ ಆದ್ಯತೆ ನೀಡಿದ್ದಾರೆ. ಬಜೆಟ್ ಪ್ರಾರಂಭದಲ್ಲೇ ಸಪ್ತಋಷಿ ಮಂತ್ರ ಪಠಿಸಿದ ಅವರು, ತಮ್ಮ ಬಜೆಟ್‍ನಲ್ಲಿ ಅಂತರ್ಗತ ಅಭಿವೃದ್ಧಿ, ಕೊನೆಯ ಮೈಲಿಯವರೆಗೂ ಸಂಪರ್ಕ, ಮೂಲಸೌಕರ್ಯ ಮತ್ತು ಹೂಡಿಕೆ, ಸುಪ್ತ ಸಾಮಥ್ರ್ಯವನ್ನು ಹೊರಹಾಕುವುದು, ಹಸಿರು ಬೆಳವಣಿಗೆ, ಯುವಶಕ್ತಿ ಮತ್ತು ಹಣಕಾಸು ವಲಯವನ್ನು ಬಲಪಡಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದ್ದು, ಉಜ್ವಲ ಭವಿಷ್ಯದತ್ತ ಸಾಗುತ್ತಿದೆ. ಇದು ಅಮೃತಕಾಲದ ಮೊದಲ ಬಜೆಟ್ ಹಿಂದಿನ ಬಜೆಟ್‍ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದಾಗಿದೆ ಎಂದು ತಿಳಿಸಿದರು.
ಕೇಂದ್ರ ಬಜೆಟ್‍ನ ಕೆಲವು ಮುಖ್ಯ ಅಂಶಗಳು ಇಲ್ಲಿವೆ ನೋಡಿ
ಕೊವಿಡ್ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಭಾರತವು ಉಜ್ವಲ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ. ಇದನ್ನು ವಿಶ್ವಮಟ್ಟದ ಹಲವು ಸಂಸ್ಥೆಗಳು ಗುರುತಿಸಿವೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಯಾವುದೇ ಭಾರತೀಯರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲಾಗಿದೆ, 80 ಕೋಟಿ ಜನರಿಗೆ ಆಹಾರ ಒದಗಿಸಲಾಯಿತು ಎಂದು ಹೇಳಿದರು.
ಜಾಗತಿಕ ಸಂಕಷ್ಟಪರಿಸ್ಥಿತಿಯಲ್ಲಿ ಭಾರತಕ್ಕೆ ಜಿ-20 ನಾಯಕತ್ವ ಲಭಿಸಿದೆ. ವಸುಧೈವ ಕುಟುಂಬಕಂ ಮಂತ್ರದ ಆಶಯ ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಭಾರತದ ಆರ್ಥಿಕತೆಯು ದೊಡ್ಡಮಟ್ಟದಲ್ಲಿ ಪ್ರಗತಿ ಕಂಡಿದೆ.
ನಮ್ಮ ಸ್ಥಾನಮಾನವು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಮುಟ್ಟಿದ್ದೇವೆ. ಭಾರತ ಉತ್ತಮ ಆಡಳಿತದ ಪ್ರಗತಿಶೀಲ ದೇಶ ಎಂದು ವಿಶ್ವದಲ್ಲೇ ಗೌರವ ಪಡೆದಿದೆ ಎಂದು ತಿಳಿಸಿದರು.
Budget 2023, Nirmala Sitharaman, lists, 7 priorities,