ಆರ್ಥಿಕ ಹಿಂಜರಿತಕ್ಕೆ ಬೂಸ್ಟರ್ ನೀಡುವ ಆಯವ್ಯಯ ಮಂಡಿಸಲಾಗುವುದು : ಸಿಎಂ

Social Share

ಬೆಂಗಳೂರು,ಫೆ.13- ಸಮಗ್ರ ಕರ್ನಾಟಕದ ಅಭಿವೃದ್ಧಿಯ ಚಿಂತನೆ ಹಾಗೂ ಆರ್ಥಿಕ ಹಿಂಜರಿತಕ್ಕೆ ಬೂಸ್ಟರ್ ನೀಡುವ ಆಯವ್ಯಯವನ್ನು ಮಂಡಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2022-23ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಹಾಗೆಯೇ ಕೋವಿಡ್‍ನಿಂದ ತತ್ತರಿಸಿರುವ ಆರ್ಥಿಕತೆಗೆ ಚೈತನ್ಯ ನೀಡಲು ಬೂಸ್ಟರ್ ನೀಡುವ ಉದ್ದೇಶವಿದೆ ಎಂದರು.
ಒಟ್ಟಾರೆ ಬಜೆಟ್‍ನಲ್ಲಿ ಆರ್ಥಿಕಾಭಿವೃದ್ಧಿ, ಜನಕಲ್ಯಾಣ, ಆರ್ಥಿಕ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಸಿದ್ದತೆ ನಡೆಸಲಾಗುತ್ತಿದೆ. ದುಡಿಯುವ ವರ್ಗ ಹಾಗೂ ಬಡವರ ಕಲ್ಯಾಣಕ್ಕೂ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಹಿಜಾಬ್ ವಿವಾದದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಮಾಹಿತಿಯನ್ನು ಅಧಿಕಾರಿಗಳು ಗಮನಿಸುತ್ತಿದ್ದಾರೆ. ಅಲ್ಲದೆ, ಅವರ ಬಳಿ ಅವರದ್ದೇ ಆದ ಮಾಹಿತಿ ಇದೆ. ಅಲ್ಲದೆ ತನಿಖೆಯೂ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮೊದಲಿನಂತೆ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳು ಈ ವಿವಾದದ ವಿಚಾರದ ಕಡೆ ಕಿವಿಕೊಡದೆ ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ನಡೆಯುವ ಪರೀಕ್ಷೆ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಪ್ರೌಢಶಾಲೆ ತರಗತಿಗಳು ಪ್ರಾರಂಭವಾದ ನಂತರ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಮಾಡುತ್ತೇವೆ. ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಸುಧಾರಣೆಗೆ ನಿವೃತ್ತ ಐಎಎಸ್ ಅಕಾರಿ ಶ್ರೀನಿವಾಸ್‍ಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸೋರಿಕೆ ತಡೆಗಟ್ಟಿ ನಿಗಮಗಳ ಸ್ವಾವಲಂಬನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೆಯೇ ವಿದ್ಯುತ್ ಸರಬರಾಜು ಕಂಪೆನಿಗಳ ಸುಧಾರಣೆಗೂ ಸಮಿತಿ ರಚನೆ ಮಾಡಲಾಗಿದೆ.
ಸಾರಿಗೆ ಸಂಸ್ಥೆಗಳು ಹಾಗೂ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಶಕ್ತಿ ತುಂಬಿ ವಿಶೇಷ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶವಿದೆ ಎಂದು ಹೇಳಿದರು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜಕ್ಕನಕಟ್ಟಿ ಗ್ರಾಮದಲ್ಲಿ ಡಿಸ್ಟಲರಿ ಘಟಕಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಇನ್ನು 6 ತಿಂಗಳಲ್ಲಿ ಕೆಲಸ ಪ್ರಾರಂಭಿಸಲಿದೆ.
ಇದರಿಂದ ಕಬ್ಬು ಬೆಳೆಗಾರರ ಸಂಖ್ಯೆ ಹೆಚ್ಚುವುದಲ್ಲದೆ, ಬೆಳೆಗೂ ಯೋಗ್ಯಬೆಲೆ ಸಿಗಲಿದೆ. ಪರಿಸರ ಸ್ನೇಹಿತ ಎಥೆನಾಲ್ ಉತ್ಪಾದನೆಗೂ ಆದ್ಯತೆ ನೀಡಲಾಗುವುದು. ಕೇಂದ್ರ ಸರ್ಕಾರ ಪರಿಸರ ಸ್ನೇಹಿ ಇಂಧನಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿದೆ. ಹೀಗಾಗಿ ರಾಜ್ಯದಲ್ಲೂ ಜೈವಿಕ ಇಂಧನಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.

Articles You Might Like

Share This Article