ಬೆಂಗಳೂರು.ಫೆ.26- ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಕೈಗಾರಿಕೆಗೆ ಸಂಬಂಧಿಸಿದ ಬಜೆಟ್ ಪೂರ್ವ ಸಭೆಯಲ್ಲಿ ಬೇಡಿಕೆಗಳ ಸುರಿಮಳೆಯೇ ಹರಿದಿದೆ . ಎಫ್‍ಕೆಸಿಸಿಐ, ಕಾಸಿಯಾ ,ಪೀಣ್ಯ ಕೈಗಾರಿಕಾ ಸಂಘ, ಮಹಿಳಾ ಉದ್ಯಮಿಗಳ ಸಂಘ, ಬೆಂಗಳೂರು ಸೇರಿ ರಾಜ್ಯದ ವಿವಿಧ ಕೈಗಾರಿಕಾ ವಸಾಹತುಗಳಿಗೆ ಆರ್ಥಿಕ ಬೆಂಬಲ ಸೇರಿ ಹಲವು ರಿಯಾಯಿತಿಗಳಿಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದ ಎಂಎಸ್‍ಎಂಇ ಗಳು , ನವೋದ್ಯಮಗಳಿಗೆ ಕೆಎಸ್‍ಎಫ್‍ಸಿ ವತಿಯಿಂದ ಶೇಕಡಾ 4 ರ ದರದಲ್ಲಿ ಮೃದು ಸಾಲ,ವಿದ್ಯುತ್ ತೆರಿಗೆಯನ್ನು ಶೇ.9 ರಿಂದ ಶೇ.4ಕ್ಕೆ ಮರು ಪರಿಷ್ಕರಿಸುವುದು, ಸುಮಾರು 1 ಸಾವಿರ ಕೋಟಿ ಅನುದಾನ ನೀಡಬೇಕೆಂದು ಕಾಸಿಯಾ ಆಡಳಿತಾಧಿಕಾರಿ ಪಿ.ಶ್ರೀಧರ್ ಮನವಿ ಮಾಡಿದ್ದಾರೆ.
ದಾಬಸ್‍ಪೇಟೆಯಲ್ಲಿ ಯೋಜಿಸಿರುವ ಕಾಸಿಯಾ ಶ್ರೇಷ್ಠತಾ ಮತ್ತು ಅನ್ವೇಷಣಾ ಕೇಂದ್ರದ (ಕೆಸಿಓಇಐ) ಪ್ರಮುಖ ಮೂಲ ಸೌಕರ್ಯಗಳನ್ನು ಪೂರ್ಣಗೊಳಿಸಲು 5ಕೋಟಿ ರೂ.ಗಳ ಹೆಚ್ಚುವರಿ ಅನುದಾನ, ಕೆಎಸ್‍ಎಸ್‍ಐಡಿಸಿ ಕೈಗಾರಿಕಾ ವಸಾಹತುಗಳ ಜೊತೆಗೆ ಖಾಸಗಿ ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರತಿ ಜಿಲ್ಲಾಗೆ 50 ಕೋಟಿ ರೂ. ಮೀಸಲಿಡುವುದು, ಕರ ಸಮಾಧಾನ ಯೋಜನೆಯನ್ನು ಜೂನ್ 2023ರ ವರೆಗೆ ವಿಸ್ತರಿಸುವುದು ಸೇರಿದಂತೆ ಹಲವು ಬೇಡಿಕೆ ಮುಂದಿಡಲಾಗಿದೆ.
ರಾಜ್ಯದ ಆರ್ಥಿಕ, ಕೈಗಾರಿಕಾಭಿವೃದ್ಧಿ, ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಪೀಣ್ಯ ಕೈಗಾರಿಕಾ ವಲಯದ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಒದಗಿಸುವಂತೆ ಪೀಣ್ಯ ಕೈಗಾರಿಕಾ ಸಂಘ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ. ಸಂಘದ ಅಧ್ಯಕ್ಷ ಮುರಳಿ ಕೃಷ್ಣ, ಗೌರವ ಕಾರ್ಯದರ್ಶಿ ಆರ್.ಶಿವಕುಮಾರ್ ನೇತೃತ್ವದ ತಂಡ ಸಣ್ಣ ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿತು.
ಕೋವಿಡ್ ಅಲೆಗಳಿಂದ ಪೀಣ್ಯ ಕೈಗಾರಿಕಾ ವಲಯ ತತ್ತರಿಸಿದ್ದು, ಸಾಕಷ್ಟು ಉದ್ಯೋಗಿಗಳು ನಗರ ತೊರೆದಿದ್ದಾರೆ. ಆಗ್ನೇಯ ಏಷ್ಯಾದ 100 ಕ್ಕೂ ಹೆಚ್ಚು ದೊಡ್ಡ ಕೈಗಾರಿಕೆಗಳು, 8.500 ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪೀಣ್ಯ ಒಳಗೊಂಡಿದ್ದು, ವಾರ್ಷಿಕ 20ಸಾವಿರ ಕೋಟಿ ರೂ. ಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. 2,600 ಕೋಟಿ ರೂಗಿಂತ ಹೆಚ್ಚು ಆದಾಯವನ್ನು ಕೇಂದ್ರ ಹಾಗೂ ರಾಜ್ಯದ ಬೊಕ್ಕಸಕ್ಕೆ ನೀಡುತ್ತಿದೆ.
ಉಕ್ಕು, ಪ್ಲಾಸ್ಟಿಕ್, ರಾಸಾಯನಿಕಗಳು, ತಾಮ್ರ, ಅಲ್ಯೂಮಿನಿಯಂ, ವಿದ್ಯುನ್ಮಾನ ವಲಯದ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಎಂಎಸ್‍ಎಂಇ ಕ್ಷೇತ್ರ ತೀವ್ರ ಸಂಕಷ್ಟದಲ್ಲಿದೆ. ಕೂಡಲೇ ಈ ವಸ್ತುಗಳಿಗೆ ಇನ್ಪುಟ್ ತೆರಿಗೆ ಮತ್ತು ಜಿಎಸ್‍ಟಿ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದೆ.
ಪೀಣ್ಯ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಮೂಲ ಸೌಕರ್ಯ ಕಲ್ಪಿಸಬೇಕು. ಕೆಂಗೇರಿ – ಉಲ್ಲಾಳ – ಸುಂಕದಕಟ್ಟೆ – ಪೀಣ್ಯ – ಹೆಬ್ಬಾಳ – ಯಲಹಂಕಕ್ಕೆ ಮೆಟ್ರೋ ರೈಲು ಮಾರ್ಗ್ನ ನಿರ್ಮಿಸಬೇಕು. ಪೀಣ್ಯ ವಲಯದಲ್ಲಿ ಕೆಲಸ ಮಾಡುತ್ತಿರುವ ಹತ್ತು ಲಕ್ಷ ಕಾರ್ಮಿಕರಲ್ಲಿ ನಾಲ್ಕು ಲಕ್ಷ ಮಹಿಳೆಯರಿದ್ದಾರೆ.
ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಮೆಟ್ರೋ ರೈಲು ಬಳಸಲು ಇದರಿಂದ ಸಹಕಾರಿಯಾಗಲಿದ್ದು, ರೈಲು ಸೇವೆ ದೊರೆತರೆ ಪೀಣ್ಯ ವಲಯದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ರಸ್ತೆಗಳ ಸುಧಾರಣೆ, ಒಳಚರಂಡಿ ನಿರ್ಮಾಣದ ಜತೆಗೆ ಆಸ್ತಿ ತೆರಿಗೆ ದರ ಇಳಿಸಬೇಕು ಎಂದು ಕೋರಿದರು.
ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರ ಒಕ್ಕೂಟದ ಬೇಡಿಕೆ ಮಂಡಿಸಿ 2030ರ ವೇಳೆಗೆ ಮಹಿಳಾ ಉದ್ಯಮಶೀಲತೆಯನ್ನು 50% ಸುಧಾರಿಸುವ ನಿಟ್ಟಿನಲ್ಲಿ ಅನುಕೂಲಕರ ಪರಿಸರ ಹಾಗೂ ವ್ಯವಸ್ಥೆ ನಿರ್ಮಿಸಿ ಮತ್ತು ಸೂಕ್ತ ನೀತಿಗಳನ್ನು ರಚಿಸುವಂತೆ ಮನವಿ ಸಲ್ಲಿಸಿತು. ಇತ್ತೀಚೆಗೆ ಬಿಡುಗಡೆಯಾದ 2020-25ರ ಕೈಗಾರಿಕಾ ನೀತಿ ಮಹಿಳಾ ಉದ್ಯಮಶೀಲತೆ ಅಭಿವೃದ್ಧಿಗೆ ಯಾವುದೇ ಪ್ರಾಮುಖ್ಯತೆ ಮತ್ತು ವ್ಯಾಪ್ತಿಯನ್ನು ಹೊಂದಿಲ್ಲ. ಮಹಿಳಾ ಕೇಂದ್ರಿತ ಕೈಗಾರಿಕಾ ನೀತಿ ರೂಪಿಸುವಂತೆ ಉಬುಂಟು ಒಕ್ಕೂಟ ಒತ್ತಾಯಿಸಿತು.
ರಾಜ್ಯಾದ್ಯಂತ ಹೆಚ್ಚಿನ ಮಹಿಳಾ ಉದ್ಯಮಿಗಳು ಉತ್ಪಾದನಾ ವಲಯವಾದ ಕೃಷಿ, ಆರೋಗ್ಯ ಕರಕುಶಲ ವಸ್ತುಗಳು, ಆಹಾರ ಸಂಸ್ಕರಣೆ ಇತ್ಯಾದಿಗಳಲ್ಲಿ ತೊಡಗಿರುವ ಕಾರಣ ಐಟಿ ಹೊರತುಪಡಿಸಿ ಈ ವಿಭಾಗಗಳಿಗೆ ಪ್ರೋತ್ಸಾಹ ನೀಡಬೇಕಾಗಿ ಆಗ್ರಹಿಸಿತು. ಮಹಿಳಾ ಉದ್ಯಮಿಗಳಿಗೆ ಸಬ್ಸಿಡಿ ದರದಲ್ಲಿ ಭೂಮಿ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಲಾಯಿತು. ಎಫ್‍ಕೆಸಿಸಿಐ ವತಿಯಿಂದ ರಾಜ್ಯದ ಕೈಗಾರಿಗಳು ಎದುರಿಸುತ್ತಿರುವ ಸಮಸ್ಯೆ ಎಳೆ ಎಳೆಯಾಗಿ ಬಿಚ್ಚಿಟ್ಟು , ಈ ಭಾರಿ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನಕ್ಕೆ ಒತ್ತಾಯಿಸಲಾಯಿತು.
