ಬೆಂಗಳೂರು,ಜ.9- ಅತ್ಯುತ್ತಮ ಬಜೆಟ್ ನೀಡುವ ದೃಷ್ಟಿಯಿಂದ ಸಂಕ್ರಾಂತಿ ವೇಳೆಗೆ ರಾಜ್ಯ ಸರಕಾರದ ಇಲಾಖೆವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ಹಣಕಾಸು ಖಾತೆ ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಲಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಬಹುತೇಕ ಮೇ ತಿಂಗಳಲ್ಲಿ ನಡೆಯುವ ಸಂಭವದ ಹಿನ್ನಲೆಯಲ್ಲಿ ಈ ಬಾರಿ ಮಾರ್ಚ್ ತಿಂಗಳ ಬದಲಿಗೆ ಫೆಬ್ರವರಿಯಲ್ಲೇ ಮುಂಗಡಪತ್ರ ಮಂಡಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಬಜೆಟ್ ಪೂರ್ವಭಾವಿ ಸಭೆಗಳನ್ನು ಜನವರಿ 2ನೇ ವಾರದಿಂದಲೇ ನಡೆಸಲು ತೀರ್ಮಾನಿಸಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆಗೆ ಮಾಹಿತಿಗಳೊಂದಿಗೆ ಸಿದ್ಧರಾಗಿ ಬರುವಂತೆ ರಾಜ್ಯ ಸರ್ಕಾರದ ಹಲವಾರು ಇಲಾಖೆಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಈಗಾಗಲೇ ಮುಖ್ಯಮಂತ್ರಿಗಳ ಸಚಿವಾಲಯದಿಂದ ಸೂಚನೆ ಕಳುಹಿಸಲಾಗಿದೆ ಎಂದು ರಾಜ್ಯ ಸರಕಾರದ ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ಆಯ- ವ್ಯಯ ಪತ್ರಕ್ಕೆ ಫೆಬ್ರವರಿ ಎರಡನೇ ವಾರದಿಂದ ಮುಂಗಡಪತ್ರದ ಪೂರ್ವಭಾವಿ ಸಭೆ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಮಾರ್ಚ್ ತಿಂಗಳ ಬದಲು ಫೆಬ್ರವರಿಯಲ್ಲೇ ಬಜೆಟ್ ಮಂಡಿಸುವ ಸಂಬಂಧ ತಯಾರಿ ನಡೆಸಿದ್ದಾರೆ.
ದಟ್ಟ ಮಂಜು ; ಟ್ರಕ್ಗೆ ಬಸ್ ಅಪ್ಪಳಿಸಿ ಮೂರು ಸಾವು
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳು ಇಲಾಖೆಗಳ ಜೊತೆಗಿನ ಸಭೆ ಅಲ್ಲದೆ ಹಲವಾರು ಸಂಘ ಸಂಸ್ಥೆಗಳ ಸಭೆಯನ್ನೂ ನಡೆಸಿ ಬಜೆಟ್ ಬೇಡಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ರೈತ ಸಂಘಗಳು, ಎಫ್ಕೆಸಿಸಿಐ ಸೇರಿದಂತೆ ಹಲವು ಪ್ರಮುಖ ಸಂಘ ಸಂಸ್ಥೆಗಳು ಮತ್ತು ವಾಣಿಜ್ಯೋದ್ಯಮ ಸಂಸ್ಥೆಗಳ ಜೊತೆ ಮುಖ್ಯಮಂತ್ರಿ ಬೊಮ್ಮಾಯಿ ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಫೆಬ್ರವರಿ ತಿಂಗಳ ಮೊದಲ ವಾರದೊಳಗೆ ಸರ್ಕಾರದ ಎಲ್ಲ ಪ್ರಮುಖ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಜೊತೆಗಿನ ಬಜೆಟ್ ಪೂರ್ವಭಾವಿ ಸಭೆಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆಂದು ಸಿಎಂ ಸಚಿವಾಲಯದ ಮೂಲಗಳು ತಿಳಿಸಿವೆ.
ಚುನಾವಣಾ ವರ್ಷವಾಗಿದ್ದರಿಂದ ಜನಪ್ರಿಯ ಆಯವ್ಯಯ ಪತ್ರ ಮಂಡಿಸಲು ಮುಖ್ಯಮಂತ್ರಿಗಳು ಆಸಕ್ತಿವಹಿಸಿದ್ದು ಅದಕ್ಕಾಗಿ ಉತ್ತಮ ಯೋಜನೆಗಳನ್ನು ಘೋಷಿಸುವ ಸಂಬಂಧ ಆಪ್ತ ಸಚಿವರಲ್ಲಿ ಕೆಲವು ಸಲಹೆಗಳನ್ನು ಸಹ ನೀಡಲು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಚುನಾವಣೆಯಲ್ಲಿ ತಮ್ಮ ಪಕ್ಷ ಬಿಜೆಪಿಗೆ ಹೆಚ್ಚಿನ ಮತಗಳನ್ನು ಸೆಳೆಯುವಂತೆ ಆಕರ್ಷಕ ಯೋಜನೆಗಳನ್ನ ಘೋಷಣೆ ಮಾಡುವ ಬಗ್ಗೆಯೂ ಸಿಎಂ ಗಮನ ಹರಿಸಿದ್ದಾರೆ.
ದುಡಿಯುವ ವರ್ಗಕ್ಕೆ ಆದ್ಯತೆ:
ಈ ಬಾರಿಯ ಬಜೆಟ್ನಲ್ಲಿ ದುಡಿಯುವ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ. ಮೀಸಲಾತಿ ಹೆಚ್ಚಳ ಬಗ್ಗೆ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ಮುಂಗಡಪತ್ರದಲ್ಲಿ ಪ್ರಸ್ತುತಪಡಿಸಲಿದು ಎಂಬುದು ಗೊತ್ತಾಗಿದೆ. ಹಿಂದೂ ಅಜೆಂಡಾ ಬಗ್ಗೆಯೂ ಹಲವಾರು ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ. ರಾಮನಗರದ ಐತಿಹಾಸಿಕ ರಾಮದೇವರ ಬೆಟ್ಟವಾದಲ್ಲಿ ಅಯೋಧ್ಯ ಮಾದರಿಯ ದೇವಸ್ಥಾನ ನಿರ್ಮಾಣಕ್ಕೆ ಬಜೆಟ್ನಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.
ಅಮೆರಿಕಾದಲ್ಲಿ ಮೊದಲ ಸಿಖ್ ನ್ಯಾಯಾಧೀಶೆಯಾದ ಮೋನಿಕಾ ಸಿಂಗ್
ಹೀಗಾಗಿ ಪೂರ್ವ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳ ಘೋಷಣೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಹೊಸ ಬಜೆಟ್ನಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಜೊತೆಗೆ ಕಳೆದ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಿದ ಯೋಜನೆಗಳು ಎಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆ. ಇನ್ನೂ ಯಾವ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಬಾಕಿ ಇದೆ ಎಂಬ ಬಗ್ಗೆಯೂ ಮುಖ್ಯಮಂತ್ರಿಗಳು ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಳೆದ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಹಣದಲ್ಲಿ ಎಷ್ಟು ಅನುದಾನ ಖರ್ಚಾಗಿದೆ ಮತ್ತು ಎಷ್ಟು ಅನುದಾನ ವೆಚ್ಚವಾಗದೇ ಉಳಿದಿದೆ ಎಂಬ ಬಗ್ಗೆಯೂ ಅವರು ವಿವರಗಳನ್ನು ಪಡೆದು ಹೊಸ ಬಜೆಟ್ನಲ್ಲಿ ಹಣಕಾಸಸು ಹಂಚಿಕೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
budget, preparation, CM Bommai, meeting, department,