ಪರಿಷತ್‍ನಲ್ಲಿ ಮತ್ತೆ ಗದ್ದಲ

ಬೆಂಗಳೂರು, ಮಾ.4- ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕುರಿತಂತೆ ಬಿಜೆಪಿ ಸದಸ್ಯ ರವಿಕುಮಾರ್ ಕ್ಷಮೆ ಕೇಳಬೇಕೆಂದು ಪ್ರತಿಪಕ್ಷದ ಸದಸ್ಯರು ಪಟ್ಟು ಹಿಡಿದ ಕಾರಣ ಪರಿಷತ್‍ನಲ್ಲಿಂದು ಮತ್ತೆ ಗದ್ದಲದ ವಾತಾವರಣ ಉಂಟಾಯಿತು. ರವಿಕುಮಾರ್ ಕ್ಷಮೆ ಕೇಳಬೇಕೆಂದು ವಿಪಕ್ಷಗಳು ಪಟ್ಟು ಹಿಡಿದರೆ, ನಾನು ನೀಡಿರುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ರವಿಕುಮಾರ್ ಪಟ್ಟು ಹಿಡಿದರು.

ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾದ-ವಿವಾದಗಳಾಗಿ ಕೋಲಾಹಲ ಉಂಟಾಯಿತು. ಕೊನೆಗೆ ಸದನದಲ್ಲಿ ದುರ್ನಡತೆ ತೋರಿರುವ ರವಿಕುಮಾರ್ ವಿರುದ್ಧ ನೀತಿ-ನಿರೂಪಣೆ, ನಿಯಮದ ಅಡಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸಭಾಪತಿಗಳಾದ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ನೋಟಿಸ್ ನೀಡಿ ಧರಣಿ ಹಿಂಪಡೆದರು.

ಇದಕ್ಕೂ ಮುನ್ನ ಬೆಳಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಪ್ರಾರಂಭಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ನಾಚಿಕೆಯಾಗಬೇಕೆಂದು ಹೇಳಿರುವ ರವಿಕುಮಾರ್ ತಕ್ಷಣ ಕ್ಷಮೆ ಯೋಚಿಸಬೇಕು ಎಂದು ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಮಗೆ ಸದನದಲ್ಲಿ ಚರ್ಚೆ ನಡೆಯಬೇಕೆಂಬ ಅಭಿಲಾಷೆ ಇದೆ. ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕು. ನಾಳೆ ಬಜೆಟ್ ಮಂಡನೆ ಇದೆ. ರವಿಕುಮಾರ್ ಕ್ಷಮೆ ಕೇಳಬೇಕು ಎಂದು ಎಸ್.ಆರ್.ಪಾಟೀಲ್ ಒತ್ತಾಯಿಸಿದರು.

ಆಗ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು ಹೇಳಿಕೆ ನೀಡಬೇಕೆಂದು ರವಿಕುಮಾರ್ ಅವರಿಗೆ ಸೂಚಿಸಿದರು. ಪ್ರತಿಪಕ್ಷಗಳ ಸದಸ್ಯರುಗಳ ಗದ್ದಲದ ನಡುವೆಯೇ ರವಿಕುಮ್ ಹೇಳಿಕೆ ನೀಡಿ ವೀರ ಸಾವರ್ಕರ್ ಒಬ್ಬ ದೇಶಪ್ರೇಮಿ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಪಂಡಿತ್ ಜವಾಹರ್‍ಲಾಲ್ ನೆಹರು ಸೇರಿದಂತೆ ಅನೇಕ ಮಹನೀಯರ ಜತೆ ಸೇರಿ ಹೋರಾಟ ನಡೆಸಿದ್ದರು. ಮಹಾರಾಷ್ಟ್ರದಲ್ಲಿ ಅವರ ಮೂರು ಜನ ಸಹೋದರರನ್ನು ಒಂದೇ ಜೈಲಿನಲ್ಲಿ ಕೂಡಿ ಹಾಕಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಇಡೀ ಕುಟುಂಬವೇ ಬಲಿದಾನವಾಗಿದೆ ಎಂದು ಪ್ರಶಂಸಿಸಿದರು.

ರವಿಕುಮಾರ್ ಈ ಹೇಳಿಕೆ ನೀಡುತ್ತಿದ್ದಂತೆ ಸದನದ ಬಾವಿಯಲ್ಲಿದ್ದ ಪ್ರತಿಪಕ್ಷದ ಸದಸ್ಯರು ನಮಗೆ ಅವರು ದೊರೆಸ್ವಾಮಿ ಕುರಿತಂತೆ ನೀಡಿರುವ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು. ಅವರ ಉಪನ್ಯಾಸ ನಮಗೇನೂ ಅಗತ್ಯವಿಲ್ಲ. ರವಿಕುಮಾರ್ ಹೆಡ್‍ಮಾಸ್ಟರ್ ಅಲ್ಲ, ನಾವು ವಿದ್ಯಾರ್ಥಿಗಳೂ ಅಲ್ಲ ಎಂದು ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜೆಡಿಎಸ್‍ನ ಬಸವರಾಜ ಹೊರಟ್ಟಿ ಅವರು ಸದನ ಈಗಾಗಲೇ ಎರಡು ದಿನ ವ್ಯರ್ಥವಾಗಿದೆ. ಪುನಃ ಹೇಳಿದ್ದನ್ನೇ ಹೇಳುವುದರಲ್ಲಿ ಅರ್ಥವಿಲ್ಲ. ರವಿಕುಮಾರ್ ವಿಷಾದ ವ್ಯಕ್ತಪಡಿಸಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಏಕಿಷ್ಟು ಮೊಂಡು ಹಠ ಹಿಡಿದಿದ್ದಾರೆ ಎಂದು ಪ್ರಶ್ನಿಸಿದರು.

ಗದ್ದಲದ ನಡುವೆಯೇ ರವಿಕುಮಾರ್ ಮಾತು ಮುಂದುವರಿಸಿದಾಗ, ಜೆಡಿಎಸ್‍ನ ಭೋಜೇಗೌಡ ಮಾತನಾಡಿ, ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸದೆಯೇ ಉಪನ್ಯಾಸ ಮಾಡಲು ಹೊರಟಿದ್ದಾರೆ. ನಾವು ಕೂಡ ಇತಿಹಾಸ ಓದಿದ್ದೇವೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೂ ಅಪಾರ ಗೌರವವಿದೆ. ಮಹಾತ್ಮಗಾಂಧಿ, ವೀರ ಸಾವರ್ಕರ್ ಬಗ್ಗೆ ಅಪಾರ ಗೌರವವಿದೆ. ಮೊದಲು ರವಿಕುಮಾರ್ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಗದ್ದಲದ ನಡುವೆ ರವಿಕುಮಾರ್ ವೀರ ಸಾವರ್ಕರ್ ಒಬ್ಬ ಹುಲಿಯೇ ಹೊರತು ಹೇಡಿಯಲ್ಲ. ನಿನ್ನೆ ಸದನದಲ್ಲಿ ಏನು ಹೇಳಿಕೆ ಕೊಟ್ಟಿದ್ದೆನೋ ಅದಕ್ಕೆ ಈಗಲೂ ಬದ್ಧ. ಯಾವುದೇ ಕಾರಣಕ್ಕೂ ವಿಷಾದ ವ್ಯಕ್ತಪಡಿಸುವ ಪ್ರಶ್ನೆ ಇಲ್ಲ. ಒಬ್ಬ ಸ್ವತಂತ್ರ ಸೇನಾನಿಗೆ ಹೇಡಿ ಎಂದು ಹೇಳಿರುವ ದೊರೆಸ್ವಾಮಿ ಅವರ ಬಗ್ಗೆ ನಾನೇಕೆ ಕ್ಷಮೆ ಕೇಳಲಿ ಎಂದು ಪ್ರಶ್ನಿಸಿದರು.
ಇದರಿಂದ ಸದನದಲ್ಲಿ ಮತ್ತೆ ಗದ್ದಲ ಉಂಟಾಯಿತು.

ಎಸ್.ಆರ್.ಪಾಟೀಲ್ ಅವರು ನಿಮಗೆ ಸದನ ನಡೆಸಲು ಇಷ್ಟವಿಲ್ಲ. ಹೇಗೋ ಕಾಟಾಚಾರಕ್ಕೆ ಕಲಾಪ ನಡೆಸುತ್ತಿದ್ದೀರಿ. ನಿಯಮ-242ರ ಪ್ರಕಾರ ದುರ್ನಡತೆ ತೋರಿದ ಆರೋಪದಡಿ ರವಿಕುಮಾರ್ ವಿರುದ್ಧ ನೀತಿ-ನಿರೂಪಣೆ, ನಿಯಮದಡಿ ಶಿಸ್ತುಕ್ರಮ ಜರುಗಿಸಬೇಕೆಂದು ಹೇಳಿ ಸಭಾಪತಿ ಅವರಿಗೆ ನೋಡಿಸ್ ನೀಡಿ ಧರಣಿ ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದರು.