ತಿರುಪತಿ,ಜು.12- ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಿರುಪತಿ-ತಿರುಮಲದಲ್ಲಿ ರಾಜ್ಯ ಸರ್ಕಾರ ನಿರ್ಮಾಣ ಮಾಡುತ್ತಿರುವ ಸುಸಜ್ಜಿತ ಕರ್ನಾಟಕ ಭವನ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ.
ಸುಮಾರು 236 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಗೊಳ್ಳಲಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ಕರ್ನಾಟಕ ಭವನದಲ್ಲಿ ಒಟ್ಟು 236 ಕೊಠಡಿಗಳು ಇರಲಿದ್ದು, ಇದರಲ್ಲಿ ಅತಿ ಗಣ್ಯರು ( ವಿವಿಐಪಿ), ಗಣ್ಯರು ( ವಿಐಪಿ) ಹಾಗೂ ಜನಸಾಮಾನ್ಯರಿಗೆ ಪ್ರತ್ಯೇಕವಾಗಿ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ.
ತಿರುಮಲ – ತಿರುಪತಿಯಲ್ಲಿ ಯಾವುದೇ ರಾಜ್ಯವು ತನ್ನ ಭಕ್ತರಿಗಾಗಿ ಇಷ್ಟು ದೊಡ್ಡ ಪ್ರಮಾಣದ ವಸತಿ ಸಮುಚ್ಚಯ ನಿರ್ಮಾಣ ಮಾಡುತ್ತಿಲ್ಲ. ಕರ್ನಾಟಕ ರಾಜ್ಯ ಮಾತ್ರ ಯಾತ್ರಾರ್ಥಿಗಳಿಗಾಗಿಯೇ ಇಂತಹ ವಿಶಿಷ್ಟ ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲು ಮುಂದಾಗಿರುವುದು ವಿಶೇಷ.
ವಾಸ್ತವವಾಗಿ ಕರ್ನಾಟಕ ಭವನ ಈ ಹಿಂದೆಯೇ ನಿರ್ಮಾಣವಾಗಬೇಕಿತ್ತು. ಆದರೆ ರಾಜ್ಯಕ್ಕೆ ಸೇರಿದ ಈ ಭೂಮಿಯನ್ನು ಕೆಲವರು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರಿಂದ ವಿಳಂಬವಾಗಿತ್ತು. ಭಕ್ತರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಮನಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಜೊತೆ ಮಾತುಕತೆ ನಡೆಸಿ ಭೂ ವ್ಯಾಜ್ಯವನ್ನು ನ್ಯಾಯಾಲಯದಿಂದ ಹೊರಗಡೆ ಇತ್ಯಾರ್ಥ ಮಾಡಿಕೊಳ್ಳುವ ಪ್ರಸ್ತಾವನೆ ಮುಂದಿಟ್ಟರು.
ರಾಜ್ಯದ ಈ ಪ್ರಸ್ತಾವನೆಯನ್ನು ಆಂಧ್ರಪ್ರದೇಶ ಸರ್ಕಾರ ಒಪ್ಪಿಕೊಂಡು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಭವನ ನಿರ್ಮಾಣಕ್ಕೆ 2020ರ ಸೆಪ್ಟೆಂಬರ್‍ನಲ್ಲಿ ಯಡಿಯೂರಪ್ಪ ಹಾಗೂ ಜಗನ್‍ಮೋಹನ್ ರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಬೆಟ್ಟದ ಮೇಲೆ ಕರ್ನಾಟಕಕ್ಕೆ ಸೇರಿರುವ 6.67 ಎಕರೆ ಪ್ರದೇಶದಲ್ಲಿ ವಸತಿ ಗೃಹ ನಿರ್ಮಾಣವಾಗಲಿದ್ದು, ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ಭವನ ನಿರ್ಮಾಣ ಮಾಡಲಾಗುತ್ತಿದೆ.
ಒಟ್ಟು 3 ಲಕ್ಷ ಚದರ ಅಡಿ ಜಾಗದಲ್ಲಿ ಸಂಪಿಗೆ, ಸೇವಂತಿಗೆ, ತಾವರೆ ಮತ್ತು ಮಲ್ಲಿಗೆ ಹೆಸರಿನ ನಾಲ್ಕು ಭವ್ಯ ಕಟ್ಟಡಗಳು ನಿರ್ಮಾಣವಾಗಲಿವೆ. ಟಿಟಿಡಿ ಹೊಸ ಕಟ್ಟಡಗಳ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ. ಕರ್ನಾಟಕ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳಲಿವೆ.
1964ರಲ್ಲಿ ನ್ಯೂ ಮೈಸೂರು ಚೌಲ್ಟ್ರಿ ನಿರ್ಮಾಣಕ್ಕೆ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಂಕುಸ್ಥಾಪನೆ ಮಾಡಿದ್ದರು. ಆದಾದ ಬಳಿಕ ಸಿಎಂ ಯಡಿಯೂರಪ್ಪ ಮತ್ತು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಒಟ್ಟಾಗಿ ಕರ್ನಾಟಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ್ದು ವಿಶೇಷವಾಗಿದೆ.
ಹೊಸ ಕಟ್ಟಡಗಳ ನಿರ್ಮಾಣದ ಜೊತೆಗೆ ಈ ಹಿಂದೆ ಇದ್ದ ಕನಕಾಂಬರ ಎಂಬ ಹೆಸರಿನ ಕಟ್ಟಡವನ್ನು ನವೀಕರಣ ಮಾಡಲಾಗುತ್ತದೆ. ಕರ್ನಾಟಕದಿಂದ ಹೆಚ್ಚಿನ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ಆದರೆ, ಎಲ್ಲರಿಗೂ ಉಳಿದುಕೊಳ್ಳಲು ಕರ್ನಾಟಕ ಭವನದಲ್ಲಿ ಕೊಠಡಿಗಳು ಸಿಗುತ್ತಿರಲಿಲ್ಲ. ಆದ್ದರಿಂದ, ನಾಲ್ಕು ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎನ್ನುತ್ತಾರೆ ಟಿಟಿಡಿ ಸದಸ್ಯರು ಆಗಿರುವ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದಿಂದ ಭಕ್ತರು ದೇವಾಲಯಕ್ಕೆ ನಡೆದುಕೊಂಡೇ ಹೋಗಬಹುದು. ಈ ಯೋಜನೆಯ ಮುಂಬರುವ ಫೆಬ್ರವರಿ ತಿಂಗಳಿಗೆ ಮುಕ್ತಾಯಗೊಂಡು ಪ್ರಧಾನಿ ನರೇಂದ್ರಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಗನ್‍ಮೋಹನ್ ರೆಡ್ಡಿ ಅವರಿಂದ ಉದ್ಘಾಟನೆ ನೆರವೇರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ತೆರಳುತ್ತಾರೆ. ಎಲ್ಲರಿಗೂ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ಕೊಠಡಿಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಭಕ್ತರಿಗೆ ಕರ್ನಾಟಕ ಭವನದಲ್ಲೇ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದ್ದು, ನೂತನ ಭವನ ನಿರ್ಮಾಣವಾದರೆ ಪ್ರತಿ ದಿನ 1,800 ಭಕ್ತರು ಉಳಿದುಕೊಳ್ಳಬಹುದು.
ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ತಿಗಳಿಗೆ ಶೀಘ್ರವೇ 346 ಸುಸಜ್ಜಿತ ವಸತಿ ಕೊಠಡಿಗಳು ಸಿದ್ಧವಾಗಲಿವೆ. ಕರ್ನಾಟಕ ಭವನ ನವೀಕರಣ ವಸತಿಗೃಹಗಳ ನಿರ್ಮಾಣ ಸೇರಿದಂತೆ ಒಟ್ಟಾರೆ ಸುಮಾರು 236 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ತಿರುಪತಿಗೆ ನಿತ್ಯ ಲಕ್ಷಾಂತರ ಯಾತ್ರಾರ್ಥಿಗಳು ಬರುತ್ತಿದ್ದು ಇವರ ಪೈಕಿ ರಾಜ್ಯದಿಂದ ಬರುವ ಯಾತ್ರಾರ್ಥಿಗಳಲ್ಲಿ ಸುಮಾರು ಏಕಕಾಲಕ್ಕೆ ಒಂದುವರೆ ಸಾವಿರಕ್ಕೂ ಹೆಚ್ಚು ಯಾತ್ರಾರ್ತಿಗಳಿಗೆ ರಾಜ್ಯ ಸರ್ಕಾರದಿಂದ ವಸತಿ ಸೌಲಭ್ಯ ಕಲ್ಪಿಸಬಹುದು. ಹೀಗಾಗಿ ರಾಜ್ಯ ಸರ್ಕಾರ ಈಗ ತಕ್ಷಣಕ್ಕೆ 100 ಕೋಟಿ ರೂ ಬಿಡುಗಡೆ ಮಾಡುತ್ತಿದ್ದು ಉಳಿದ ಅನುದಾನವನ್ನು ಹಂತ ಹಂತವಾಗಿ ಕೊಡಲಿದೆ.
ತಿರುಪತಿ ಬೆಟ್ಟದ ಕೆಳಗೆ ರಾಜ್ಯ ಸರ್ಕಾರದ ಆಸ್ತಿ ಇದೆ. ಅದನ್ನು ಕೂಡ ಅಭಿವೃದ್ಧಿಪಡಿಸಿ ಅದರಿಂದ ಬರುವ ಆದಾಯವನ್ನು ತಿರುಮಲದಲ್ಲಿರುವ ಕರ್ನಾಟಕ ಭವನ ನಿರ್ವಹಣೆಗೆ ಬಳಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ವಿಶ್ವನಾಥ್ ತಿಳಿಸಿದರು.