ಬೆಂಗಳೂರಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದು ಇಬ್ಬರು ಕಾರ್ಮಿಕರ ಸಾವು

Social Share

ಬೆಂಗಳೂರು,ಅ.11- ಹಳೆಯ ಕಟ್ಟಡದ ಮೇಲ್ಛಾವಣಿ ಕುಸಿದು ಮಲಗಿದ್ದ ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಅವಶೇಷಗಳಡಿ ಸಿಲುಕಿ ಬಿಹಾರ ಮೂಲದ ಇಬ್ಬರು ಮೃತಪಟ್ಟಿರುವ ಘಟನೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಅರ್ಮಾನ್(22) ಮತ್ತು ಜೈನುದ್ದೀನ್(28) ಮೃತಪಟ್ಟ ಕಾರ್ಮಿಕರು. ಸಿ.ವಿ.ರಾಮನ್ ಆಸ್ಪತ್ರೆಗೆ ಈ ಇಬ್ಬರ ಮೃತದೇಹಗಳನ್ನು ರವಾನಿಸಲಾಗಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಹೂಡಿ ಬಳಿಯ ಗ್ರಾಫೈಟ್ ಇಂಡಿಯಾ ರಸ್ತೆ, ಉಡುಪಿ ಪಾರ್ಕ್ ಸಮೀಪ ಹಳೆಯ ಕಟ್ಟಡವಿದ್ದು, ಹಲವು ತಿಂಗಳಿನಿಂದ ಯಾರೂ ವಾಸವಾಗಿರಲಿಲ್ಲ. ಈ ಕಟ್ಟಡವನ್ನು ಹಲವು ದಿನಗಳಿಂದ ಕೆಡುವುತ್ತಿದ್ದರು.
ಬಿಹಾರ ಮೂಲದ ಐದು ಮಂದಿ ಕಾರ್ಮಿಕರು ಈ ಕಟ್ಟಡದ ಒಂದು ಭಾಗವನ್ನು ಕೆಡವಿದ್ದ ಕಾರ್ಮಿಕರು ಮತ್ತೊಂದು ಭಾಗ ಕೆಡವಬೇಕಾಗಿತ್ತು. ಆ ಭಾಗದಲ್ಲಿದ್ದ ರೂಮಿನಲ್ಲಿ ರಾತ್ರಿ ಈ ಐದೂ ಮಂದಿ ಮಲಗಿದ್ದರು.
ನಗರದಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಈ ರೂಮಿನ ಮೇಲ್ಛಾವಣಿ ಮುಂಜಾನೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ.

ನಿದ್ರೆಯಲ್ಲಿದ್ದ ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಹದೇವಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ ಮೂವರು ಕಾರ್ಮಿಕರನ್ನು ಪ್ರಾಣಾಪಾಯದಿಂದ ರಕ್ಷಿಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಇಬ್ಬರು ಕಾರ್ಮಿಕರು ಅವಶೇಷಗಳಡಿ ಸಿಲುಕಿ ಗಂಭೀರ ಗಾಯಗೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಹದೇವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article