ಸಮಾಜಘಾತುಕರಿಗೆ ಬುಲ್ಡೋಜರ್ ಕಾನೂನು ಜಾರಿ ಮಾಡುತ್ತೇವೆ : ಸಿಎಂ ಎಚ್ಚರಿಕೆ

Social Share

ಬೆಂಗಳೂರು,ಜು.28- ಸಂದರ್ಭ ಬಂದರೆ ಕರ್ನಾಟಕದಲ್ಲೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾನೂನನ್ನು ಅಳವಡಿಸಿಕೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಹಿ ಅವರು ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಉತ್ತರ ಪ್ರದೇಶದ ಪರಿಸ್ಥಿತಿಯೇ ಬೇರೆ. ಇಲ್ಲಿನ ಪರಿಸ್ಥಿತಿಯೇ ಬೇರೆ. ನಾವು ಕಾಲ ಕಾಲಕ್ಕೆ ಏನೆಲ್ಲಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೊ ಅವುಗಳನ್ನು ತೆಗೆದುಕೊಂಡಿದ್ದೇವೆ. ಸಂದರ್ಭ ಬಂದರೆ ಖಂಡಿತವಾಗಿಯೂ ಯೋಗಿ ಆದಿತ್ಯನಾಥ್ ಮಾದರಿಯನ್ನು ಅಳವಡಿಸಿಕೊಳ್ಳಲು ಸಿದ್ಧ ಎಂದು ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಘಾತುಕ ಶಕ್ತಿಗಳನ್ನು ಸದೆಬಡಿಯಲು ಸರ್ಕಾರ ಹಿಂದು-ಮುಂದು ನೋಡುವುದಿಲ್ಲ.

ಡಿಜಿ ಹಳ್ಳಿ-ಕೆಜಿ ಹಳ್ಳಿಯಿಂದ ಹಿಡಿದು, ಶಿವಮೊಗ್ಗದಲ್ಲಿ ನಡೆದ ಹರ್ಷನ ಕೊಲೆ ಆರೋಪಿಗಳನ್ನು 24 ಗಂಟೆಯಲ್ಲೇ ಬಂಧಿಸಿ
ದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಸಮಾಜಘಾತುಕ ಶಕ್ತಿಗಳು ಅಟ್ಟಹಾಸ ಮೆರೆಯಲು ಬಿಡುವುದಿಲ್ಲ ಎಂದು ಹೇಳಿದರು.

ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ನಡೆದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈಗಾಗಲೇ ಆರೋಪಿಗಳ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಯಾವುದೇ ದುಷ್ಟಶಕ್ತಿಗಳು ಮೆರೆಯಲು ಅವಕಾಶ ಕೊಡುವುದಿಲ್ಲ. ಆಯಾ ಕಾಲಕ್ಕೆ ಸಂದರ್ಭಕ್ಕನುಗುಣವಾಗಿ ಕಠಿಣವಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕೋಮು ಭಾವನೆ ಕದಡುವ ಶಕ್ತಿಗಳನ್ನು ಸದೆಬಡಿಯುತ್ತೇವೆ ಎಂದು ಸಿಎಂ ಹೇಳಿದರು.

ನಮ್ಮ ಪೊಲೀಸರು ದಕ್ಷರಾಗಿರುವುದರಿಂದಲೇ ಆರೋಪಿಗಳನ್ನು ಕೆಲವು ಪ್ರಕರಣಗಳಲ್ಲಿ ಬಂಧಿಸಿದ್ದಾರೆ. ಹಾಗೆಂದು ನಮ್ಮ ಸಹನೆಯನ್ನು ದೌರ್ಬಲ್ಯವೆಂದುಕೊಳ್ಳಬಾರದು. ಯಾವ ಸಂದರ್ಭದಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮಗೂ ಗೊತ್ತಿದೆ. ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕೆಂದು ಅವರು ಮನವಿ ಮಾಡಿದರು.

ಯಾವೆಲ್ಲ ಘಟನೆಗಳು ನಡೆಯಬಾರದು ಎಂದುಕೊಂಡಿದ್ದೆವೋ ಅದನ್ನು ಸೃಷ್ಟಿಸಲು ಕೆಲವು ಸಂಘಟನೆಗಳು ಹುಟ್ಟಿಕೊಂಡಿವೆ. ಇವುಗಳನ್ನು ಹೇಗೆ ಹದ್ದುಬಸ್ತಿನಲ್ಲಿ ಇಡಬೇಕು ಎಂಬುದು ನಮಗೆ ಗೊತ್ತು. ಪ್ರತಿಪಕ್ಷದವರು ಜನರ ಭಾವನೆ ಕೆರಳಿಸುವ ಕೆಲಸ ಮಾಡಬಾರದೆಂದು ತಿರುಗೇಟು ನೀಡಿದರು.

ಕೇವಲ ಐದು ವಿದ್ಯಾರ್ಥಿಗಳಿಂದ ಹಿಜಾಬ್ ಸಂಘರ್ಷವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಯಿತು. ನ್ಯಾಯಾಲಯದ ತೀರ್ಪು ಏನು ಬಂದಿತು ಎಂಬುದು ಎಲ್ಲರಿಗೂ ಗೊತ್ತು. ಅದೇ ರೀತಿ ಹಲಾಲ್ ವಿಷಯವನ್ನು ಮುಂದಿಟ್ಟುಕೊಂಡು ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟರು. ಸುಪ್ರೀಂಕೋರ್ಟ್ ತೀರ್ಪನ್ನು ನಾವು ಯಥಾವತ್ತಾಗಿ ಅನುಷ್ಠಾನ ಮಾಡಿದೆವು. ಸವಾಲುಗಳು ನಮ್ಮ ಮುಂದೆ ಇವೆ. ಅವುಗಳನ್ನು ನಾವು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಬೇರೆ ಬೇರೆ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಶಂಕಿತ ಉಗ್ರರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಶಂಕಿತ ಉಗ್ರನನ್ನು ನಮ್ಮ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕೋಮು ಸೌಹಾರ್ದ ಕದಡುವ ಶಕ್ತಿಗಳು ಹೆಚ್ಚುತ್ತಲೇ ಇವೆ. ಆದರೂ ಸರ್ಕಾರ ಇವುಗಳನ್ನು ಬಗ್ಗುಬಡಿಯಲು ಸಿದ್ಧವಿದೆ ಎಂದು ಎಚ್ಚರಿಕೆ ಕೊಟ್ಟರು.

Articles You Might Like

Share This Article