ಬಸ್ ಪಲ್ಟಿ, ಪೊಲೀಸ್ ಅಧಿಕಾರಿ ಸಾವು

Spread the love

ಹಾಸನ, ಮೇ 1-ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ರಸ್ತೆ ಬದಿಗೆ ಉರುಳಿ ಬಿದ್ದ ಪರಿಣಾಮ ಆರಕ್ಷಕ ಉಪನಿರೀಕ್ಷಕರೊಬ್ಬರು ಮೃತಪಟ್ಟು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮಂಜುನಾಥ್ (59) ಮೃತಪಟ್ಟ ಪೊಲೀಸ್ ಅಧಿಕಾರಿ.  ಪ್ರಸ್ತುತ ಚನ್ನರಾಯಪಟ್ಟಣ ಟೌನ್ ನಿವಾಸಿಯಾಗಿರುವ ಇವರು ಇತ್ತೀಚಿಗಷ್ಟೇ ಮುಂಬಡ್ತಿ ಪಡೆದು ಆರಕ್ಷಕ ಉಪ ನಿರೀಕ್ಷಕರಾಗಿ ಅರಸೀಕೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಪ್ರತಿನಿತ್ಯ ಚನ್ನರಾಯಪಟ್ಟಣದಿಂದ ಅರಸೀಕೆರೆಗೆ ಪ್ರಯಾಣ ಬೆಳೆಸಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಕರ್ತವ್ಯ ಮುಗಿಸಿ ವಾಪಸ್ ಮನೆಗೆ ಹಿಂದಿರುಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಮಂಜುನಾಥ್ 1993ರ ಮೇ 5ರಂದು ಪೊಲೀಸ್ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. 29 ವರ್ಷಗಳ ಸೇವೆ ಸಲ್ಲಿಸಿದ ಇವರು ನಿವೃತ್ತಿ ಜೀವನದ ಹಂತದಲ್ಲಿದ್ದರು.

ಬಸ್‍ನಲ್ಲಿ ಪ್ರಯಾಣ ಮಾಡುವಾಗ ಗಂಭೀರವಾಗಿ ಗಾಯಗೊಂಡ ಇವರನ್ನು ಕೂಡಲೇ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

Facebook Comments