ಕಾನ್ಪುರ, ಜ.31- ಎಲೆಕ್ಟ್ರಿಕ್ ಬಸ್ ಇಳಿಜಾರು ರಸ್ತೆಯಲ್ಲಿ ಬ್ರೇಕ್ ಫೇಲಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ಹರಿದು 6 ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಕಾನ್ಪುರದ ಟಾಟಾ ಮಿಲ್ ಕ್ರಾಸ್ ರೋಡ್‍ನ ಬಳಿ ಎಲೆಕ್ಟ್ರಿಕಲ್ ಬಸ್ ನಿಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಬಸ್‍ನ ಬ್ರೇಕ್ ವೈಫಲ್ಯಗೊಂಡು ಏಕಾಏಕಿ ಅಡ್ಡಾದಿಡ್ಡಿ ಬಸ್ ಚಲಿಸಿ ಕಾರು ಹಾಗೂ ಬೈಕ್‍ಗಳಿಗೆ ಡಿಕ್ಕಿ ಹೊಡೆದುಕೊಂಡು ಹೋಗಿ ಪಾದಚಾರಿಗಳ ಮೇಲೆ ಹರಿದಿದೆ.
ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು , ಒಂಬತ್ತು ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಸರಣಿ ಅಪಘಾತದಿಂದಾಗಿ ಕಾರುಗಳು, ಬೈಕ್ ಸೇರಿ ಹಲವು ವಾಹನಗಳು ಜಖಂಗೊಂಡಿದೆ.
ಮೃತ ಪಾದಚಾರಿಗಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
