ಮತ್ತೆ ಬಸ್‍ಗಳ ಮೇಲೆ ಕಲ್ಲು ತೂರಾಟ

ಬೀದರ್/ಮೈಸೂರು, ಡಿ.14- ಸಾರಿಗೆ ಸಂಸ್ಥೆಗಳ ನೌಕರರ ಪ್ರತಿಭಟನೆ ನಡುವೆ ಸಂಚಾರ ಆರಂಭಿಸಿದ ಎರಡು ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈಶಾನ್ಯರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದಕ್ಕೆ ಕಿಡಿಗೇಡಿಗಳು ಇಂದು ಬೆಳಗ್ಗೆ ಕಲ್ಲು ತೂರಾಟ ನಡೆಸಿದ್ದಾರೆ. ಇಂದು ಮಧ್ಯಾಹ್ನ ಕೆಎಸ್‍ಆರ್‍ಟಿಸಿ ಬಸ್ ವೊಂದರ ಮೇಲೆ ಕಿಡಿಗೇಡಿಗಳು
ಕಲ್ಲು ತೂರಾಟ ನಡೆಸಿದ್ದು ಬಸ್‍ನ ಗಾಜುಗಳಿಗೆ ಹಾನಿಯಾಗಿವೆ.

ಕಲ್ಬುರ್ಗಿಯಿಂದ ಬೀದರ್‍ಗೆ ಬರುತ್ತಿದ್ದ ಬಸ್‍ಗೆ ಶಿವನಗರದ ಬರೀದ್‍ಶಾಹಿ ಗಾರ್ಡನ್ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ವರದಿಯಾಗಿದೆ. ಈ ಬಸ್‍ನಲ್ಲಿ 25 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ನ್ಯೂಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿರಿಯಾಪಟ್ಟಣದಿಂದ ಬೆಟ್ಟದಪುರಕ್ಕೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಮೇಲೆ ಸಿಗೂರಿನ ಬಳಿ ಕಲ್ಲು ತೂರಾಟ ನಡೆಸಿದ ವರದಿಯಾಗಿದೆ.