ಜನಾಕ್ರೋಶ -ಗೊಂದಲಗಳ ನಡುವೆಯೇ ಕೆಲವೆಡೆ ಬಸ್ ಸಂಚಾರ

ಬೆಂಗಳೂರು, ಡಿ.14- ಸಾರಿಗೆ ನಿಮಗಳ ನೌಕರರ ಮುಷ್ಕರ ಕ್ಷಣ ಕ್ಷಣಕ್ಕೂ ವಿಚಿತ್ರ ತಿರುವು ಪಡೆಯುತ್ತಿದ್ದು, ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಲಿಖಿತ ಭರವಸೆ ನೀಡಿದ ಹೊರತಾಗಿಯೂ ಮುಷ್ಕರ ಮುಂದುವರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಡಿ.11ರಿಂದ ನಾಲ್ಕು ಸಾರಿಗೆ ನಿಮಗಳ ಚಾಲಕ ಮತ್ತು ನಿರ್ವಾಹಕರು ಸೇವೆಯನ್ನು ಸ್ಥಗಿತಗೊಳಿಸಿ ಅನಿರ್ದಿಷ್ಠಾವಧಿ ಅಸಹಾಕಾರ ಚಳವಳಿ ಆರಂಭಿಸಿದ್ದಾರೆ. ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕ ಜನ ಜೀವನ ಹೈರಾಣಾಗಿದೆ.

ಸರ್ಕಾರ ಹಲವು ಸುತ್ತಿನ ಮಾತುಕತೆಗಳನ್ನು ನಿಗಮಗಳ ಟ್ರೇಡ್ ಯೂನಿಯನ್‍ಗಳ ಜತೆ ನಡೆಸಿದೆ. ನಾಲ್ಕು ಟ್ರೇಡ್ ಯೂನಿಯನ್ ಹೊರತುಪಡಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಸ್ ಸಂಚಾರಕ್ಕೆ ವಿರುದ್ಧವಿದ್ದು, ಸಾರಿಗೆ ಸಂಪರ್ಕ ಸ್ಥಗಿತಗೊಂಡಿದೆ. ಆದರೆ, ಇಂದು ಪ್ರತಿಭಟನಾ ನಿರತರು ಮತ್ತು ಟ್ರೇಡ್ ಯೂನಿಯನ್‍ಗಳ ನಡುವೆ ಭಿನ್ನಮತ ಉಂಟಾಗಿದ್ದು, ಸಿಐಟಿಯು, ಎಐಟಿಯುಸಿ ಬೆಂಬಲಿತ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಕೆಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಕೆಲ ಬಸ್‍ಗಳ ಸಂಚಾರ ಆರಂಭಗೊಂಡಿತ್ತು.

ನಿನ್ನೆ ಸಚಿವರ ನೇತೃತ್ವದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ಪ್ರಮುಖರನ್ನು ಕರೆಸಿ ಮಾತುಕತೆ ನಡೆಸಲಾಯಿತು. ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಬೇಡಿಕೆ ಹೊರತು ಪಡಿಸಿ ಉಳಿದೆಲ್ಲವುಗಳನ್ನು ಸಹಾನುಬೂತಿಯಿಂದ ಪರಿಶೀಲಿಸುವ ಭರವಸೆ ನೀಡಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಾದ ಚಂದ್ರ ಹಾಗೂ ಮತ್ತಿತರರು ಮುಷ್ಕರವನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದರು. ಆದರೆ, ಇಂದು ಬೆಳಗ್ಗೆ ಅದೇ ಮುಖಂಡರು ಫ್ರೀಡಂ ಫಾರ್ಕ್ ಬಳಿ ಬಂದು ಮುಷ್ಕರದಲ್ಲಿ ಭಾಗವಹಿಸಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಮತ್ತು ಸರ್ಕಾರ ಲಿಖಿತವಾಗಿ ಭರವಸೆ ನೀಡುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಘೋಷಿಸಿದರು.

ಇಂದು ಬೆಳಗ್ಗೆ ಮತ್ತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ್ ಮತ್ತಿತರರು ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಿದರು. ಬಳಿಕ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಲಿಖಿತ ಭರವಸೆ ನೀಡಲು ನಿರ್ಧರಿಸಲಾಯಿತು. ಅದರಂತೆ ಸಾರಿಗೆ ಸಚಿವ ಲಕ್ಷ್ಮಣಸವದಿ ಅವರ ಸಹಿಯೊಂದಿಗೆ 9 ಬೇಡಿಕೆಗಳೊಂದಿಗೆ ಸರ್ಕಾರ ಅಂಗೀಕಾರ ನೀಡಿರುವುದಾಗಿ ತಿಳಿಸಲಾಗಿತ್ತು.

ಅದರಲ್ಲಿ ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಸೌಲಭ್ಯ ಒದಗಿಸುವುದು, ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ 30 ಲಕ್ಷ ಪರಿಹಾರ ನೀಡುವುದು, ಅಂತರ್‍ನಿಗಮಗಳ ವರ್ಗಾವಣೆಗೆ ನೀತಿ ರೂಪಿಸುವುದು, ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿಗೊಳಿಸುವುದು, ತರಬೇತಿ ಅವಧಿಯನ್ನು ಎರಡರ ಬದಲಾಗಿ ಒಂದು ವರ್ಷಕ್ಕೆ ಇಳಿಸುವುದು, ನಿಗಮದ ನೌಕರರಿಗೆ ಎಚ್‍ಎಂಆರ್‍ಎಸ್ ಸೌಲಭ್ಯ ಜಾರಿಗೊಳಿಸುವುದು ಸೇರಿದಂತೆ 8 ಬೇಡಿಕೆಗಳಿಗೆ ಖಚಿತ ಭರವಸೆ ನೀಡಲಾಯಿತು.

ಪ್ರಮುಖವಾಗಿ ಆರನೇ ವೇತನ ಆಯೋಗದ ಶಿಫಾರಸಗಳನ್ನು ನಿಗಮಗಳ ನೌಕರರಿಗೆ ಜಾರಿಗೊಳಿಸಬೇಕು ಬೇಡಿಕೆ ಕುರಿತಂತೆ ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಿದೆ. ಈ ಬಗ್ಗೆ ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸುವುದಾಗಿ ಸರ್ಕಾರ ಹೇಳಿದೆ. ಸರ್ಕಾರದ ಪರವಾಗಿ ಬಿಎಂಟಿಸಿ ಅಧ್ಯಕ್ಷ ನಂದೀಶ್‍ರೆಡ್ಡಿ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಫ್ರೀಡಂ ಪಾರ್ಕ್‍ಗೆ ತೆರಳಿ ಸರ್ಕಾರದ ಪತ್ರವನ್ನು ಪ್ರತಿಭಟನಾಕಾರರಿಗೆ ಹಸ್ತಾಂತರಿಸಿದರು.

ಇದನ್ನು ಓದಿ ವಿವರಿಸಿದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು 8 ಭರವಸೆಗಳನ್ನು ಒಪ್ಪಿಕೊಂಡಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಆದರೆ, ವೇತನ ಆಯೋಗಕ್ಕೆ ಭರವಸೆ ನೀಡದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಕಾರಣವಾಗಿರುವುದು ಎರಡು ಪ್ರಮುಖ ಬೇಡಿಕೆಗಳು. ಒಂದು ಆರನೇ ವೇತನ ಆಯೋಗ, ಮತ್ತೊಂದು ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದಾಗಿತ್ತು. ಆರನೇ ವೇತನ ಆಯೋಗವನ್ನು ಜನವರಿ 1ರಿಂದ ಯಥಾವತ್ತಾಗಿ ಜಾರಿಗೊಳಿಸುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. ಆದರೆ, ಲಿಖಿತ ಭರವಸೆಯಲ್ಲಿ ಅದನ್ನು ಉಲ್ಲೇಖಿಸಿಲ್ಲ ಎಂದರು. ಸರ್ಕಾರದ ಭರವಸೆಗಳ ಆಧಾರದ ಮೇಲೆ ಮುಷ್ಕರ ಮುಂದುವರೆಸಬೇಕೇ ? ಬೇಡವೇ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಭಟನಾಕಾರರನ್ನು ಪ್ರಶ್ನಿಸಿದರು.