ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಜನರು ತಿರುಗಿ ಬೀಳಲಿದ್ದಾರೆ : ರ್.ಅಶೋಕ್

ಬೆಂಗಳೂರು,ಡಿ.14- ಮುಂದಿನ ದಿನಗಳಲ್ಲಾದರೂ ರೈತ ಸಂಘಟನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿಲನ್ ರೀತಿ ವರ್ತನೆ ಮಾಡುವುದನ್ನು ನಿಲ್ಲಿಸದಿದ್ದರೆ ಜನರು ತಿರುಗಿ ಬೀಳಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ.  ದಿನಕ್ಕೊಂದರಂತೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ನಿಮ್ಮ ಹುಚ್ಚಾಟಗಳಿಗೆ ಜನರನ್ನು ಬಲಿಕೊಡಬೇಡಿ. ಇನ್ನು ಮುಂದಾದರೂ ಇಂಥ ಹುಚ್ಚಾಟಗಳನ್ನು ಮಾಡಬೇಡಿ ಎಂದು ಅಶೋಕ್ ಟಾಂಗ್ ಕೊಟ್ಟರು.

ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಕೊಡುತ್ತಿರುವುದರಿಂದಲೇ ಈ ಸಮಸ್ಯೆ ಸೃಷ್ಟಿಯಾಗಿದೆ. ಸಾರಿಗೆ ನೌಕರರ ಸಂಘಟನೆಗಳಲ್ಲಿ ಅಧ್ಯಕ್ಷರ್ಯಾರು? ಉಪಾಧ್ಯಕ್ಷರು ಯಾರು ಎಂಬುದೇ ಗೊತ್ತಿಲ್ಲ. ಅನಂತಸುಬ್ಬರಾವ್ ಯಾರು ಎಂದು ಕೆಲವರು ಪ್ರಶ್ನಿಸುತ್ತಾರೆ, ಕೋಡಿಹಳ್ಳಿ ಚಂದ್ರಶೇಖರ್‍ಗೂ ನಮಗೂ ಸಂಬಂಧವೇ ಇಲ್ಲ ಎಂದು ಇನ್ನು ಕೆಲವರು ಹೇಳುತ್ತಾರೆ. ನಿಮ್ಮ ಹುಚ್ಚಾಟದಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ಎಲ್ಲೇ ಪ್ರತಿಭಟನೆ, ಮುಷ್ಕರ ನಡೆದರೆ ನಮ್ಮ ಬಂಡೆ ಅಣ್ಣ(ಡಿ.ಕೆ.ಶಿವಕುಮಾರ್) ಹಾಜರಿರುತ್ತಾರೆ. ಸಿದ್ದರಾಮಯ್ಯನವರಿಗಿಂತ ಮುಂಚೆ ನಾನು ಹೇಳಿಕೆ ಕೊಡಬೇಕು ಎಂಬುದು ಬಂಡೆಯಣ್ಣನ ಉದ್ದೇಶ. ಡಿಕೆ.ಶಿವಕುಮಾರ್ ಎಲ್ಲಿ ಹೇಳಿಕೆ ಕೊಟ್ಟುಬಿಟ್ಟರೆ ಮಾಧ್ಯಮಗಳಲ್ಲಿ ನನ್ನ ಸುದ್ದಿ ಬರದಿರಬಹುದು ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಕೂಡ ಡಿ.ಕೆಶಿಗೆ ಠಕ್ಕರ್ ಕೊಡುವಂತೆ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಇಬ್ಬರಲ್ಲೂ ಪೈಪೋಟಿ ಶುರುವಾಗಿದೆ ಎಂದು ಹೇಳಿದರು.

ಸಾರಿಗೆ ಸಂಸ್ಥೆಗಳ ನೌಕರರ 9 ಬೇಡಿಕೆಗಳನ್ನು ಈಗಾಗಲೇ ನೀಡಿರುವ ಭರವಸೆಯಂತೆ ಈಡೇರಿಸಲು ಸರ್ಕಾರ ಬದ್ದ ಎಂದಿರುವ .ಅಶೋಕ್, ಮುಷ್ಕರದ ಹಿನ್ನೆಲೆಯಲ್ಲಿ ನಡೆಯುತ್ತಿರುವ ದೊಂಬರಾಟದ ನಾಟಕವನ್ನು ಇಡೀ ರಾಜ್ಯದ ಜನ ನೋಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಗೆ ಸಂಬಂಧಪಡದವರ ಸ್ವಪ್ರತಿಷ್ಠೆಗೆ ಒಳಗಾಗಿ ಬಸ್ ಬಂದ್ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಮೂವರು ಸಚಿವರು ನೀಡಿದ ಭರವಸೆಯಂತೆ ಬೇಡಿಕೆ ಈಡೇರಿಸಲು ಬದ್ದ. ಅದರ ಬಗ್ಗೆ ಸಾರಿಗೆ ಸಂಸ್ಥೆಗಳ ನೌಕರರಿಗೆ ಸಂದೇಹ ಬೇಡ ಎಂದರು.  ನಿನ್ನೆ ನಮ್ಮ ಮನೆಗೆ ಬಂದು ಪ್ರತಿಭಟನೆ ವಾಪಸ್ ಪಡೆಯುವುದಾಗಿ ಹೇಳಿದ ನೌಕರರು ಯಾರದೋ ಪ್ರತಿಷ್ಟೆಗೆ ಒಳಗಾಗಿ ಮುಷ್ಕರವನ್ನು ಮುಂದುವರೆಸುವುದಾಗಿ ಹೇಳಿರುವುದು ಸರಿಯಲ್ಲ. ಈಗಾಗಲೇ ಸುಮಾರು 1500 ಬಸ್‍ಗಳು ರಾಜ್ಯದಲ್ಲಿ ಸಂಚಾರ ಆರಂಭಿಸಿವೆ.

ಬಸ್ ಸೌಲಭ್ಯವಿಲ್ಲದೆ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಗೆ ಹೋಗುವವರು ಕೂಡ ಸಾಕಷ್ಟು ಜನರಿದ್ದಾರೆ. ಅವರ ನೋವನ್ನು ಸಹ ಪ್ರತಿಭಟನಾನಿರತರು ಗಮನಿಸಬೇಕು ಎಂದರು.  ಯೂನಿಯನ್‍ನಲ್ಲಿ ಎರಡುಮೂರು ಗುಂಪುಗಳಿವೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ ಕೆಲಸಕ್ಕೆ ಹಾಜರಾಗಬೇಕು. ವಿಧಾನಸೌಧದಲ್ಲಿ ಒಂದು ಮಾತನಾಡಿ, ಹೊರಗಡೆ ಮತ್ತೊಂದು ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಯೂನಿಯನ್ ಹೇಳಿಕೆ ದಿಕ್ಕರಿಸಿ ಮುಷ್ಕರ ಮಾಡುತ್ತಿರುವುದು ಸರಿಯಲ್ಲ. ಪ್ರತಿಭಟನೆ ಹಿಂದೆ ಯಾರು ಹುಳಿ ಹಿಂಡುತ್ತಿದ್ದಾರೆ ಎಂಬುದು ಗೊತ್ತಾಗಬೇಕು. ಪ್ರತಿಭಟನಾನಿರತರು ಜನರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಬೇಕು ಎಂದು ಹೇಳಿದರು.