ಬೆಂಗಳೂರು,ಆ.24-ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಉದ್ಯಮಿ ಪುತ್ರನನ್ನು ಕರೆಸಿಕೊಂಡು ರಿವಾಲ್ವರ್ ತೋರಿಸಿ ಬೆದರಿಸಿ 4 ಕೋಟಿ ಹಣಕ್ಕೆ ಬ್ಲಾಕ್‍ಮೇಲ್ ಮಾಡಿ ಹಣ ಕೊಡದಿದ್ದರೆ ರೇಪ್‍ಕೇಸ್ ಹಾಕುತ್ತೇನೆಂದು ಬೆದರಿಸಿ 25 ಲಕ್ಷ ಹಣ ಪಡೆದುಕೊಂಡಿದ್ದ ಮಹಿಳೆ ಸೇರಿ ಇಬ್ಬರನ್ನು ಬ್ಯಾಟ ರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ರಸ್ತೆಯ ಜನತಾ ಕಾಲೋನಿ ಟೋಲ್‍ಗೇಟ್ ಒಂದನೇ ಕ್ರಾಸ್ ನಿವಾಸಿ, ಪ್ರಮುಖ ಆರೋಪಿ ಪುಷ್ಪಾ ಅಲಿಯಾಸ್ ಪುಷ್ಪಲತ (30) ಮತ್ತು ಮೈಸೂರು ರಸ್ತೆಯ ಶಾರದಾ ಶಾಲೆ ಸಮೀಪದ ನಿವಾಸಿ ರಾಕೇಶ್ (27) ಬಂಧಿತ ಆರೋಪಿಗಳು.
ತಲೆ ಮರೆಸಿಕೊಂಡಿರುವ ಎರಡನೇ ಆರೋಪಿ ಅಯ್ಯಪ್ಪ ಮತ್ತು ನಾಲ್ಕನೆ ಆರೋಪಿ ಸಂತೋಷ್‍ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಮೈಸೂರು ರಸ್ತೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗವಿರುವ ಎಪಿಜೆ ಅಬ್ದುಲ್ ಕಲಾಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪುಷ್ಪ ಎಂಬಾಕೆ, ಉದ್ಯಮಿ ಪುತ್ರ ಸೂರಜ್‍ಗೆ ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಹೇಳಿ ಆ.11ರಂದು ಕರೆಸಿಕೊಂಡಿದ್ದಾಳೆ.
ಸೂರಜ್ ಆಕೆಯ ಮಾತು ನಂಬಿ ಕಚೇರಿಗೆ ಹೋಗಿದ್ದಾಗ, ಕಚೇರಿಯಲ್ಲಿದ್ದ ವ್ಯಕ್ತಿಯನ್ನು ಸಂತೋಷ್ ಎಂದು ಪರಿಚಯಿಸಿ, ಇವರು ಐಎಎಸ್ ಅಧಿಕಾರಿಯ ಪಿಎ, ಇವರೇ ನಿಮಗೆ ಪ್ರಾಜೆಕ್ಟ್ ಕೊಡಿಸುವ ವ್ಯಕ್ತಿ ಎಂದು ಪರಿಚಯಿಸಿದ್ದಾಳೆ.
ಆ ಸಂದರ್ಭದಲ್ಲಿ ಮತ್ತಿಬ್ಬರೊಂದಿಗೆ ಸೇರಿಕೊಂಡು ಸೂರಜ್‍ನ ಮೊಬೈಲ್ ಕಿತ್ತುಕೊಂಡು ಬಾಯಿಗೆ ಬಟ್ಟೆ ತುರುಕಿ ಕೈಕಾಲುಗಳನ್ನು ಕಟ್ಟಿ ಹಾಕಿ, ಹಲ್ಲೆ ಮಾಡಿ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದಾರೆ.
ಆರೋಪಿ ಪುಷ್ಪ 4 ಕೋಟಿ ಹಣವನ್ನು ಕೊಡುವಂತೆ ಸೂರಜ್‍ಗೆ ಬ್ಲಾಕ್‍ಮೇಲ್ ಮಾಡಿದ್ದಾಳೆ. ತನ್ನ ಬಳಿ ಅಷ್ಟೊಂದು ಹಣವಿಲ್ಲವೆಂದು ಸೂರಜ್ ಹೇಳುತ್ತಿದ್ದಂತೆ ನಕಲಿ ರಿವಾಲ್ವರ್(ಏರ್‍ಗನ್) ತೋರಿಸಿ ಹಣ ಕೊಡದಿದ್ದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ.
ರಿವಾಲ್ವರ್ ನೋಡಿ ಹೆದರಿಕೊಂಡ ಸೂರಜ್ ತನ್ನ ಸ್ನೇಹಿತನ ಮುಖಾಂತರ 25 ಲಕ್ಷ ಹಣವನ್ನು ಅಂದು ಸಂಜೆ 5 ಗಂಟೆಗೆ ತರಿಸಿ ಆರೋಪಿಗೆ ನೀಡಿದ್ದನು. ನಂತರ ಎಲ್ಲರೂ ಸೇರಿಕೊಂಡು ಸೂರಜ್‍ಗೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನೀನು ನನಗೆ ಬಲತ್ಕಾರ ಮಾಡಲು ಬಂದಿದ್ದೀಯಾ ಎಂದು ಜನರನ್ನು ಸೇರಿಸಿ ಹೇಳುತ್ತೇನೆ. ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಬಿಟ್ಟುಕಳುಹಿಸಿದ್ದರು.
ಸೂರಜ್ ಈ ವಿಷಯವನ್ನು ಕೆಲವು ದಿನಗಳು ಯಾರಿಗೂ ಹೇಳಿರಲಿಲ್ಲ. ಆ.18ರಂದು ಪೊಲೀಸ್ ಠಾಣೆಗೆ ಬಂದು ಸೂರಜ್ ಅಂದು ನಡೆದ ವಿಷಯವನ್ನುಪೊಲೀಸರಿಗೆ ತಿಳಿಸಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ಯಾಟರಾಯನಪುರ ಠಾಣೆ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ ಪ್ರಮುಖ ಆರೋಪಿ ಪುಷ್ಪಾ ಸೇರಿದಂತೆ ಇಬ್ಬರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಕೈಗೊಂಡಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಲಕ್ಷ ಹಣ ಹಾಗೂ ಒಂದು ಏರ್‍ಗನ್ ವಶಪಡಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಕಾರ್ಯಚರಣೆಯನ್ನು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ಬಿ.ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪವಿಭಾಗದ ಎಸಿಪಿ ಕೋದಂಡರಾಮ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಶಂಕರ್ ನಾಯಕ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕೈಗೊಂಡಿತ್ತು.