ರಂಗೇರಿದ ಉಪಸಮರ : ಘಟಾನುಘಟಿ ನಾಯಕರ ಬಿರುಸಿನ ಪ್ರಚಾರ

ಬೆಂಗಳೂರು, ಏ.14- ರಾಜ್ಯದಲ್ಲಿ ಉಪಸಮರದ ಕಾವು ದಿನೇ ದಿನೆ ಹೆಚ್ಚಾಗುತ್ತಿದೆ. ಘಟಾನುಘಟಿ ನಾಯಕರು ಉಪಚುನಾವಣೆ ರಣಕಣಕ್ಕಿಳಿದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಇಲ್ಲಿವರೆಗೆ ನಡೆದ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ವಿಸ್ತೃತ ವರದಿ ಇಲ್ಲಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಹಾಗೂ ಮಸ್ಕಿಯಲ್ಲಿ ಒಟ್ಟು 61ಫ್ಲೈಯಿಂಗ್ ಸ್ಕ್ವಾಡ್ ಜೊತೆ ವಿಚಕ್ಷಣಾ ದಳ ಕಾರ್ಯಾಚರಣೆ ನಡೆಸುತ್ತಿದೆ. 58 ನಿಗಾವಣೆ ದಳವನ್ನು ನಿಯೋಜಿಸಲಾಗಿದೆ. ಮೂರು ಕ್ಷೇತ್ರಗಳಲ್ಲಿನ ಸಾರ್ವಜನಿಕ ಆಸ್ತಿಗಳ ಮೇಲಿದ್ದ 1,503 ಗೋಡೆ ಬರಹ, 5,537 ಪೋಸ್ಟರ್ ಹಾಗೂ 5,795 ಬ್ಯಾನರ್‍ಗಳನ್ನು ತೆರವುಗೊಳಿಸಲಾಗಿದೆ.

ಒಟ್ಟು 56,58,510 ನಗದನ್ನು ಜಪ್ತಿ ಮಾಡಲಾಗಿದೆ. ಪೊಲೀಸರು ಹಾಗೂ ವಿಚಕ್ಷಣಾ ದಳ ಒಟ್ಟು 95,123.84 ರೂ. ಮೊತ್ತದ 311.10 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 86 ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನು ಅಬಕಾರಿ ಇಲಾಖೆ ಒಟ್ಟು 15.84 ಮೌಲ್ಯದ 5,196 ಲೀಟರ್ ಮದ್ಯ ವಶ ಪಡಿಸಿಕೊಂಡಿದ್ದಾರೆ.

ಈ ಸಂಬಂಧ ಒಟ್ಟು 70 ಗಂಭೀರ ಸ್ವರೂಪದ ಪ್ರಕರಣ ದಾಖಲಿಸಲಾಗಿದೆ. ಪರವಾನಿಗೆ ಉಲ್ಲಂಘನೆ ಸಂಬಂಧ 60 ಪ್ರಕರಣ ದಾಖಲಿಸಲಾಗಿದೆ. ಇಲ್ಲಿವರೆಗೆ 3 ಕ್ಷೇತ್ರಗಳಿಂದ ಒಟ್ಟು 4,111 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. 1912 ಜಾಮೀನು ರಹಿತ ವಾರೆಂಟನ್ನು ಜಾರಿಗೊಳಿಸಲಾಗಿದೆ.

ಮಸ್ಕಿಯಲ್ಲಿ ಹಣ ವಿತರಣೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 5 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ. ಇನ್ನು ಕೋವಿಡ್ ನಿಯಮ ಉಲ್ಲಂಘನೆ ಸಂಬಂಧ 126 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಗಂಭೀರ ಸ್ವರೂಪದ ನಿಯಮ ಉಲ್ಲಂಘನೆಯಡಿ ಸಂಬಂಧ 7 ಪ್ರಕರಣ ದಾಖಲಿಸಲಾಗಿದೆ. 119 ಪ್ರಕರಣಗಳಲ್ಲಿ ದಂಡವನ್ನು ವಿಧಿಸಲಾಗಿದೆ.