ಕಾಂಗ್ರೆಸ್‍ಗೆ ಆರ್.‌ಆರ್.‌ನಗರ, ಬಿಜೆಪಿಗೆ ಶಿರಾ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆ

ಬೆಂಗಳೂರು, ಅ.19- ಉಪ ಚುನಾವಣಾ ಕಣದಲ್ಲಿ ರಾಜರಾಜೇಶ್ವರಿನಗರವನ್ನು ಗೆಲ್ಲುವುದು ಕಾಂಗ್ರೆಸ್‍ಗೆ ಪ್ರತಿಷ್ಠೆಯಾದರೆ, ಬಿಜೆಪಿಗೆ ಶಿರಾ ಕ್ಷೇತ್ರವನ್ನು ಗೆಲ್ಲುವುದು ಪ್ರತಿಷ್ಠೆಯಾಗಿದೆ. ವಿಧಾನಪರಿಷತ್‍ನ ನಾಲ್ಕು ಕ್ಷೇತ್ರಗಳು ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ವಿಧಾನಪರಿಷತ್ ಚುನಾವಣೆ ಬಗ್ಗೆ ಕಾಂಗ್ರೆಸ್ ಅಷ್ಟೇನು ತಲೆಕೆಡಿಸಿಕೊಂಡಿಲ್ಲ. ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ರಾಜರಾಜೇಶ್ವರಿನಗರದಲ್ಲಿ ಮುನಿರತ್ನ ಅವರನ್ನು ಮಣಿಸುವುದನ್ನು ಸವಾಲಾಗಿ ತೆಗೆದುಕೊಂಡಿದೆ.

ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಮುನಿರತ್ನ ಪ್ರಬಲ ನಾಯಕರಾಗಿ ಬೆಳೆದಿದ್ದು, ಕ್ಷೇತ್ರದ ಮೇಲೆ ಬಿಗಿಯಾದ ಹಿಡಿತ ಹೊಂದಿದ್ದಾರೆ. ಉಪ ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್‍ಗೆ ಮುನಿರತ್ನ ಅವರ ವಿರುದ್ಧ ಕಣಕ್ಕಿಳಿಸಲು ಅಭ್ಯರ್ಥಿಗಳೇ ಸಿಕ್ಕಿರಲಿಲ್ಲ. ಕೊನೆಗೆ ರಾಜಕೀಯ ಮತ್ತು ಜ್ಯೋತಿಷ್ಯ ಲೆಕ್ಕಾಚಾರದಂತೆ ಕುಸುಮಾ ಅವರನ್ನು ಕಣಕ್ಕಿಳಿಸಲಾಗಿದೆ. ಕುಸುಮಾ ಪರವಾಗಿ ಸಾಕಷ್ಟು ಪ್ರಚಾರ ನಡೆಯುತ್ತಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮೂರು ಪಕ್ಷಗಳಿಂದಲೂ ನಾಯಕರ ಅದಲು-ಬದಲು ಸಾಮಾನ್ಯವಾಗಿದೆ. ಕಾಂಗ್ರೆಸ್‍ನ ಅತೃಪ್ತರು ಬಿಜೆಪಿಯತ್ತ, ಬಿಜೆಪಿಯ ಅತೃಪ್ತರು ಕಾಂಗ್ರೆಸ್‍ನ, ಜೆಡಿಎಸ್‍ನ ಅಸಮಾಧಾನಿಗಳು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಿರುವುದು ನಿತ್ಯದ ಬೆಳವಣಿಗೆಯಾಗಿದೆ. ಒಂದು ಹಂತದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಬೂತ್ ಏಜೆಂಟರೂ ಸಿಗದಂತೆ ಖಾಲಿ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಬಹಿರಂಗ ಪ್ರಚಾರಕ್ಕೆ ಇನ್ನೂ ಇಳಿದಿಲ್ಲ. ನಿಯೋಜಿತ ನಾಯಕರು ಮತ್ತು ಅಭ್ಯರ್ಥಿ ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದಾರೆ.

ಸಿದ್ದರಾಮಯ್ಯ ಅವರು ಪ್ರಮುಖ ನಾಯಕರನ್ನು ಭೇಟಿ ಮಾಡಿ ಬೆಂಬಲ ಕ್ರೂಢೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದೆಲ್ಲದರ ಹೊರತಾಗಿ ಮುನಿರತ್ನ ಅವರ ವಯಕ್ತಿಕ ಪ್ರಭಾವ ಕಾಂಗ್ರೆಸ್‍ಗೆ ಸವಾಲಾಗಿ ನಿಂತಿದೆ. ಒಂದು ವೇಳೆ ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ಗೆದ್ದಿದ್ದೇ ಆದರೆ ಬಿಜೆಪಿ ಸರ್ಕಾರದ ವಿರುದ್ಧದ ಜನಾದೇಶವೆಂದು ಭಾರೀ ಪ್ರಮಾಣದಲ್ಲಿ ಪ್ರಚಾರ ಮಾಡುವ ಸಾಧ್ಯತೆ ಇದೆ.

ಇನ್ನು ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಪ್ರಬಲ ಅಭ್ಯರ್ಥಿಯಾಗಿ ಕಾಣಿಸುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿ ನಾಯಕರಿಗೆ ರಾಜರಾಜೇಶ್ವರಿನಗರ ಕ್ಷೇತ್ರದ ಗೆಲುವಿಗಿಂತಲೂ ಶಿರಾ ಕ್ಷೇತ್ರದ ಗೆಲುವು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ವಲಸಿಗ ನಾಯಕ ರಾಜೇಶ್‍ಗೌಡ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ 9ನೇ ಬಾರಿ ಚುನಾವಣೆಯನ್ನು ಎದುರಿಸುತ್ತಿರುವ ಜಯಚಂದ್ರ ಎಂಬ ಆನೆಯನ್ನು ಕಟ್ಟಿಹಾಕುವ ಪ್ರಯತ್ನ ನಡೆಸುತ್ತಿದೆ. ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲು-ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಕಾಂಗ್ರೆಸ್‍ಗೆ ಶಿರಾಗಿಂತಲೂ ರಾಜರಾಜೇಶ್ವರಿನಗರ ಗೆಲ್ಲುವುದು ಮುಖ್ಯವಾದರೆ, ಬಿಜೆಪಿಗೆ ರಾಜರಾಜೇಶ್ವರಿನಗರಕ್ಕಿಂತಲೂ ಶಿರಾ ಗೆಲ್ಲುವುದು ಪ್ರಾಧಾನ್ಯತಾ ಅಂಶವಾಗಿದೆ. ಹಾಗಾಗಿ ಶಿರಾ ಕ್ಷೇತ್ರಕ್ಕೆ ಖುದ್ದಾಗಿ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತೆರಳಿ ಟಿಕಾಣಿ ಹೂಡಿದ್ದಾರೆ.