ರಂಗೇರಿದ ಉಪಚುನಾವಣಾ ಕಣ : ನಾಯಕರ ನಡುವೆ ಜೋರಾಯ್ತು ವಾಗ್ಯುದ್ಧ..!

Spread the love

ಬೆಂಗಳೂರು, ಅ.21- ಆರ್‍ಆರ್ ನಗರ, ಶಿರಾ ಕ್ಷೇತ್ರದ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದ್ದು, ಆಡಳಿತ, ಪ್ರತಿಪಕ್ಷಗಳ ನಾಯಕರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ, ಕೆಸರೆರಚಾಟ, ವಾಗ್ವಾದ ನಡೆದಿದೆ. ಆರ್‍ಆರ್ ನಗರದಲ್ಲಿ ಕಾರ್ಯಕರ್ತರ ನಡುವೆ ಜಟಾಪಟಿ ಉಂಟಾಗಿ ಸಂಘರ್ಷಕ್ಕೆ ಕಾರಣವಾಗಿದೆ. ಸಂಸದ ಡಿ.ಕೆ.ಸುರೇಶ್, ಆರ್‍ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ನಡುವೆ ಮಾತಿನ ಸಮರವೇ ನಡೆದಿದೆ.

ಲಕ್ಷ್ಮಿದೇವಿನಗರ ವಾರ್ಡ್‍ನಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗದ್ದಲ ಏರ್ಪಟ್ಟು ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು, ಮುನಿರತ್ನ ಬೆಂಬಲಿಗ, ಮಾಜಿ ಕಾಪೆರ್ರೇಟರ್ ವೇಲು ನಾಯ್ಕರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿಯರು ಕೂಡ ಪ್ರತಿಭಟನೆ ನಡೆಸಿದ್ದಾರೆ. ಪರಸ್ಪರ ದೂರುಗಳು ದಾಖಲಾಗಿವೆ.

ಇತ್ತ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕೈಗೊಂಡಿರುವ ಪಕ್ಷದ ನಾಯಕರು ಮಳೆಯಲ್ಲೂ ಬೆವರು ಸುರಿಸುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳ ಮುಖಂಡರು ಭಾರೀ ಪ್ರಚಾರ ನಡೆಸುತ್ತಿದ್ದು, ದಿನೇ ದಿನೇ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಅತ್ತ ಶಿರಾ ಕ್ಷೇತ್ರದಲ್ಲೂ ಕೂಡ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಆರ್‍ಆರ್ ನಗರದಲ್ಲಿ ಉಪಚುನಾವಣೆ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ ಸೇರಿದಂತೆ ಹಲವು ನಾಯಕರು ಕ್ಷೇತ್ರಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಇತ್ತ ನಾಯಕರುಗಳು ಸಭೆ-ಸಮಾರಂಭ, ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರತಿ ವಾರ್ಡ್‍ಗಳಿಗೂ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಪ್ರಮುಖರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಿದೆ.

ಜ್ಞಾನಭಾರತಿ ವಾರ್ಡ್‍ಗೆ ಸಚಿವ ಎಸ್.ಟಿ.ಸೋಮಶೇಖರ್, ಲಗ್ಗೆರೆ ವಾರ್ಡ್‍ಗೆ ಸಚಿವರಾದ ಗೋಪಾಲಯ್ಯ, ಬೈರತಿ ಬಸವರಾಜ್, ಕೊಟ್ಟಿಗೆಪಾಳ್ಯ ವಾರ್ಡ್‍ಗೆ ಸಚಿವ ಸೋಮಣ್ಣ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದ್ದು, ಇನ್ನು ಜಾಲಹಳ್ಳಿ ವಾರ್ಡ್‍ಗೆ ಶಾಸಕ ಎಸ್.ಆರ್.ವಿಶ್ವನಾಥ್, ಜೆಪಿ ಪಾರ್ಕ್ ವಾರ್ಡ್‍ಗೆ ಸತೀಶ್‍ರೆಡ್ಡಿ, ಲಕ್ಷ್ಮಿದೇವಿ ವಾರ್ಡ್‍ಗೆ ಶಾಸಕ ರಘು, ಆರ್‍ಆರ್ ನಗರ ವಾರ್ಡ್‍ಗೆ ಶಾಸಕರಾದ ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ ಹಾಗೂ ಹಲವು ಪಕ್ಷದ ಪ್ರಮುಖರನ್ನು ನೇಮಿಸಿ ಚುನಾವಣಾ ರಣತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷ ಕೂಡ ಪ್ರತಿ ವಾರ್ಡ್, ಪ್ರತಿ ಬ್ಲಾಕ್, ಪ್ರತಿ ಬೂತ್‍ಗಳಿಗೆ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಮತದಾರರನ್ನು ಸೆಳೆಯಲು ಅಖಾಡಕ್ಕಿಳಿಸಿದೆ. ಜೆಡಿಎಸ್ ಪಕ್ಷ ಕೂಡ ಕ್ಷೇತ್ರದ ಎಲ್ಲ ವಾರ್ಡ್‍ಗಳಿಗೂ ಶಾಸಕರು ಹಾಗೂ ಪಕ್ಷದ ಪ್ರಮುಖರನ್ನು ನೇಮಿಸಿ ಪ್ರಚಾರದ ಕಾರ್ಯತಂತ್ರ ರೂಪಿಸಿ ಭಾರೀ ಪ್ರಚಾರ ನಡೆಸಿದೆ.

ಇತ್ತ ಶಿರಾ ಕ್ಷೇತ್ರದಲ್ಲಿ ಚುನಾವಣೆ ಉಸ್ತುವಾರಿ ಹೊಣೆ ಹೊತ್ತಿರುವ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ಶಿರಾದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸ್ಥಳೀಯ ಎಲ್ಲ ಬಿಜೆಪಿ ಮುಖಂಡರೊಂದಿಗೆ ಸಂಪರ್ಕ ಸಾಧಿಸಿ ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಂತೆ ಇಲ್ಲೂ ಕೂಡ ಬಿಜೆಪಿಯನ್ನು ಗೆಲ್ಲಿಸಬೇಕೆಂಬ ನಿಟ್ಟಿನಲ್ಲಿ ರಣತಂತ್ರ ರೂಪಿಸಿದ್ದಾರೆ. ಸಚಿವರಾದ ಮಾಧುಸ್ವಾಮಿ, ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‍ಗೌಡಸೇರಿದಂತೆ ಹಲವು ನಾಯಕರುಗಳು ಕ್ಷೇತ್ರದಲ್ಲಿದ್ದು, ಮತದಾರರನ್ನು ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ.

ನಿನ್ನೆ ಡಿ.ಕೆ.ಶಿವಕುಮಾರ್ ಶಿರಾ ಕ್ಷೇತ್ರಾದ್ಯಂತ ಪ್ರಚಾರ ನಡೆಸಿದ್ದಾರೆ. ಶಿರಾ ಕ್ಷೇತ್ರದ ಹಲವೆಡೆ ತೆರಳಿ ಕ್ಷೇತ್ರದ ಅಭ್ಯರ್ಥಿಯಾಗಿರುವ ಟಿ.ಬಿ.ಜಯಚಂದ್ರ ಅವರ ಪರ ಮತಯಾಚನೆ ನಡೆಸಿದ್ದಾರೆ.  ಜಯಚಂದ್ರ ಪರ ಕೆ.ಎನ್.ರಾಜಣ್ಣ, ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ಕ್ಷೇತ್ರಾದ್ಯಂತ ಸಂಚರಿಸಿ ಮತ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿಯೂ ಕೂಡ ಪ್ರಚಾರ ಬಿರುಸುಗೊಂಡಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ, ಸ್ಥಳೀಯ ಜೆಡಿಎಸ್ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇದಲ್ಲದೆ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳಲ್ಲಿ ಎರಡನೆ ತಲೆಮಾರಿನ ನಾಯಕರ ಪ್ರಚಾರದ ಭರಾಟೆ ಈ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬಂದಿದೆ.  ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದರೆ, ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಜ್ವಲ್ ರೇವಣ್ಣ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಪ್ರಚಾರ ನಡೆಸುತ್ತಿದ್ದಾರೆ.

ಒಟ್ಟಾರೆ ಈ ಕ್ಷೇತ್ರದ ಚುನಾವಣೆ ಎರಡನೆ ತಲೆಮಾರಿನ ನಾಯಕತ್ವಕ್ಕೆ ವೇದಿಕೆಯಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಕ್ಷೇತ್ರದಲ್ಲೂ ಕೂಡ ಮೂರೂ ಪಕ್ಷಗಳು ಪ್ರತಿ ಹೋಬಳಿ, ಬ್ಲಾಕ್ ಮಟ್ಟದಲ್ಲಿ ಉಸ್ತುವಾರಿಗಳನ್ನು ನೇಮಿಸಿ ಪ್ರತಿದಿನ ಚುನಾವಣಾ ತಂತ್ರ ಹೆಣೆಯುತ್ತಿವೆ. ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ಕಾದು ನೋಡಬೇಕು.

Facebook Comments