ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ದೂರು ನೀಡಲು ದೆಹಲಿಗೆ ತೆರಳಿದ್ದವರು ಬರಿಗೈಯಲ್ಲಿ ವಾಪಾಸ್..!

Spread the love

ಬೆಂಗಳೂರು,ಮಾ.8- ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ದೂರು ನೀಡಲು ದೆಹಲಿಗೆ ತೆರಳಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ಆಪ್ತ ಸಹಾಯಕ ಸಂತೋಷ್ ವರಿಷ್ಠರನ್ನು ಭೇಟಿಯಾಗದೆ ಬರಿಗೈಯಲ್ಲಿ ಹಿಂದಿರುಗಿದ್ದಾರೆ.  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ದೂರು ನೀಡಲು ಬಜೆಟ್ ಮಂಡನೆಯಾಗುವ ನವದೆಹಲಿಗೆ ತೆರೆಳಿದ್ದರು.

ನಾಲ್ಕು ದಿನ ನವದೆಹಲಿಯಲ್ಲೇ ಉಳಿದಿದ್ದ ಅವರು ವರಿಷ್ಠರ ಭೇಟಿ ಸಿಗದ ಹಿನ್ನೆಲೆಯಲ್ಲಿ ಇಂದು ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬಿಎಸ್‍ವೈ ಆಡಳಿತ ವೈಖರಿ ಹಾಗೂ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪ ವಿರುದ್ಧ ಯೋಗೇಶ್ವರ್ ಮತ್ತು ಸಂತೋಷ್ ದೂರು ನೀಡಲು ನವದೆಹಲಿಗೆ ತೆರಳಿದ್ದರು.  ಅದರಲ್ಲೂ ವಿಜಯೇಂದ್ರ ಪ್ರತಿಯೊಂದು ವಿಷಯದಲ್ಲೂ ಹಸ್ತಕ್ಷೇಪ ಮಾಡುತ್ತಿರುವುದರಿಂದ ಅನೇಕ ಶಾಸಕರು ಅಸಮಾಧಾನಗೊಂಡಿದ್ದು, ಕೂಡಲೇ ವರಿಷ್ಠರು ಮಧ್ಯಪ್ರವೇಶ ಮಾಡಬೇಕೆಂಬ ಮನವಿ ಮಾಡುವುದಕ್ಕೆ ಮುಂದಾಗಿದ್ದರು.

ಆದರೆ ಜೆ.ಪಿ.ನಡ್ಡ ಅಥವಾ ಅಮಿತ್ ಷಾ ಅವರಾಗಲಿ ಈ ಇಬ್ಬರಿಗೂ ಭೇಟಿಗೆ ಅವಕಾಶ ಕೊಟ್ಟಿಲ್ಲ. ನಾವು ಅಗತ್ಯವಾದರೆ ರಾಜ್ಯ ನಾಯಕರ ಜೊತೆ ಚರ್ಚೆ ಮಾಡುತ್ತೇವೆ. ಸದ್ಯಕ್ಕೆ ನೀವು ಭೇಟಿಯಾಗಬೇಕಾದ ಅಗತ್ಯವಿಲ್ಲ ಎಂದು ಸಾಗಾಹಾಕಿ ವಾಪಸ್ ಕಳುಹಿಸಿದ್ದಾರೆ.  ಅಧಿಕಾರಿಗಳ ವರ್ಗಾವಣೆಯಲ್ಲಿ ವಿಜೇಂದ್ರ ಹಸ್ತಕ್ಷೇಪ ಮಾಡುತ್ತಿರುವುದರಿಂದ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಎಣಿಸಲಾಗುತ್ತಿದೆ.

ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಈಗಾಗಲೇ ಅನೇಕ ಶಾಸಕರು ಬೇರೆ ಬೇರೆ ಪಕ್ಷಗಳ ಮುಖಂಡರ ಜೊತೆ ರಹಸ್ಯವಾಗಿ ಮಾತುಕತೆ ನಡೆಸುತ್ತಿದ್ದಾರೆ.  ಹಿರಿಯರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರರು ಕಾಂಗ್ರೆಸ್-ಜೆಡಿಎಸ್ ಶಾಸಕರ ಜೊತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ವರಿಷ್ಠರು ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿದೆ ಎಂಬುದನ್ನು ಮನವರಿಕೆ ಮಾಡಲು ಯೋಗೇಶ್ವರ್ ಮತ್ತು ಸಂತೋಷ್ ಮುಂದಾಗಿದ್ದರು.

ಆದರೆ ವರಿಷ್ಠರ ಭೇಟಿಗೆ ಅವಕಾಶ ಸಿಗದೇ ಇರುವುದರಿಂದ ಬಂದ ದಾರಿಗೆ ಸುಂಕವಿಲ್ಲವೆಂದು ಬರಿಗೈಯಲ್ಲಿ ವಾಪಸ್ಸಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.  ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಯೋಗೇಶ್ವರ್ ಸಚಿವರಾಗುವುದು ಬಹುತೇಕ ಖಾತರಿಯಾಗಿತ್ತು. ಆದರೆ ಕೊನೆಕ್ಷಣದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳಿಂದಾಗಿ ಕೂದಲೆಳೆ ಅಂತರದಲ್ಲಿ ಕೈ ತಪ್ಪಿತು.
ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ನಾಯಕ್, ಶಿವರಾಜ್ ಪಾಟೀಲ್ ಸೇರಿದಂತೆ ಅನೇಕರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿ ಪ್ರತ್ಯೇಕ ಸಭೆ ನಡೆಸಿದ್ದರು.

ಇದರಿಂದ ತುಸು ಅಧೀರರಾದ ಸಿಎಂ ಯಡಿಯೂರಪ್ಪನವರು ಯೋಗೇಶ್ವರ್ ಅವರನ್ನು ಸಂಪುಟದಿಂದ ಕೈಬಿಟ್ಟರು. ಕಾಂಗ್ರೆಸ್-ಜೆಡಿಎಸ್‍ನಿಂದ ರಾಜೀನಾಮೆ ಕೊಟ್ಟು ಉಪಚುನಾವಣೆಯಲ್ಲಿ ಗೆದ್ದಿದ್ದ ಹತ್ತು ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿದರು. ತಮ್ಮನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವುದು ಹಾಗೂ ಸಚಿವ ಸ್ಥಾನ ಸಿಗದೆ ಅಪಮಾನಕ್ಕೆ ಒಳಗಾಗಿದ್ದ ಯೋಗೀಶ್ವರ್ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ತೆರೆಮರೆಯಲ್ಲಿ ಯತ್ನಿಸಿದ್ದರು.

ಈವರೆಗೂ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಆಪ್ತ ಸಹಾಯಕ ಸಂತೋಷ್ ಇತ್ತೀಚೆಗೆ ದೂರ ಉಳಿದಿದ್ದಾರೆ.  ಇದರಿಂದ ಅವರು ಕೂಡ ಅಸಮಾಧಾನಗೊಂಡು ವಿಜಯೇಂದ್ರ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಆಪರೇಷನ್ ಕಮಲದಲ್ಲಿ ಈ ಇಬ್ಬರು ಪ್ರಮುಖ ಪಾತ್ರ ವಹಿಸಿದ್ದರು.

ಬದಲಾದ ರಾಜಕೀಯ ಪ್ರಶಸ್ತಿಯಲ್ಲಿ ಯೋಗೇಶ್ವರ್ ಮತ್ತು ಸಂತೋಷ್ ಬಿಎಸ್‍ವೈ ಬಣದಿಂದ ದೂರ ಸರಿದಿದ್ದಾರೆ. ಹೀಗಾಗಿ ಅಸಮಾಧಾನಗೊಂಡ ಶಾಸಕರನ್ನು ಸೆಳೆದು ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ.

Facebook Comments