ಬೆಂಗಳೂರು, ಜು. 26- ಬ್ಯಾಟರಾಯನಪುರ ಠಾಣೆ ಪೊಲೀಸರು ಐದು ಮಂದಿ ಚೋರರನ್ನು ಬಂಧಿಸಿ 2.68 ಕೋಟಿ ರೂ. ಬೆಲೆಯ 1693 ಕೆಜಿ ರಕ್ತಚಂದನದ ತುಂಡುಗಳು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಿನೋದ, ಲಕ್ಷ್ಮಯ್ಯ, ಸಂಜಯ್, ರಾಜು, ಕೃಷ್ಣ ಬಂಧಿತ ಚೋರರು.
ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನ್ಯೂ ಟಿಂಬರ್ ಲೇಔಟ್‍ನಲ್ಲಿ ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆಂಬ ಖಚಿತ ಮಾಹಿತಿ ಬ್ಯಾಟರಾಯನಪುರ ಠಾಣೆ ಪೊಲೀಸರು ಲಭಿಸಿದೆ.
ತಕ್ಷಣ ಇನ್ಸ್‍ಪೆಕ್ಟರ್ ಶಂಕರ್‍ನಾಯಕ್ ಅವರು ಕರ್ನಾಟಕ ಫಾರೆಸ್ಟ್ ಆಕ್ಟ್ ಆಡಿ ಪ್ರಕರಣ ದಾಖಲು ಮಾಡಿಕೊಂಡು ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಆರೋಪಿ ವಿನೋದ್ ಸಿಕ್ಕಿಬಿದ್ದಿದ್ದು ಮತ್ತೊಬ್ಬ ಆರೋಪಿ ಅಜಯ್ ತಲೆ ಮರೆಸಿಕೊಂಡಿದ್ದಾನೆ.
ಆರೋಪಿಯಿಂದ 17 ಕೆಜಿ ತೂಕದ 2 ರಕ್ತಚಂದನ ಮರದ ತುಂಡುಗಳನ್ನು ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿನೋದ್‍ನನ್ನು ವಿಚಾರಣೆಗೊಳಪಡಿಸಿ ಆತ ನೀಡಿದ ಮಾಹಿತಿ ಮೇರೆಗೆ ಹೆಸರುಘಟ್ಟದಲ್ಲಿರುವ ಒಂಟಿ ಮನೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು 1,580 ಕೆಜಿ ತೂಕದ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ನೈಸ್ ರೋಡ್ ಜಂಕ್ಷನ್‍ನಲ್ಲಿ ರಕ್ತಚಂದನವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಯೂ ದಾಳಿ ನಡೆಸಿ ಆರೋಪಿಗಳಾದ ಲಕ್ಷ್ಮಯ್ಯ, ಸಂಜಯ್, ರಾಜು ಮತ್ತು ಕೃಷ್ಣ ಎಂಬಾತನನ್ನು ಬಂಧಿಸಿ 113 ಕೆಜಿ ರಕ್ತಚಂದನ ಮರದ ತುಂಡುಗಳು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ಬಿ.ನಿಂಬರಗಿ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪವಿಭಾಗದ ಎಪಿಸಿ ಕೋದಂಡರಾಮ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶಂಕರ್‍ನಾಯಕ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕೈಗೊಂಡಿತ್ತು.