ಶಿರಾ ಮತ್ತು ಆರ್.ಆರ್ ನಗರಕ್ಕೆ ಲಗ್ಗೆಯಿಟ್ಟ ನಾಯಕರು, ಅಬ್ಬರದ ಪ್ರಚಾರ

ಬೆಂಗಳೂರು,ಅ.27- ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ , ಪ್ರಮುಖ ರಾಜಕೀಯ ಪಕ್ಷಗಳು ಜಾತಿಯವರನ್ನು ಓಲೈಸಿಕೊಳ್ಳಲು ಮುಂದಾಗಿದ್ದು, ಮತದಾರರಿಗೆ ನಾನಾ ರೀತಿಯ ಆಸೆ-ಆಮಿಷಗಳನ್ನು ಒಡ್ಡಲಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಾದ್ಯಂತ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ದೃಶ್ಯ ಭಾರೀ ವೈರಲ್ ಆಗಿದೆ. ಮಹಿಳೆಯರಿಗೆ ಸಾಮೂಹಿಕವಾಗಿ ಅರಿಶಿಣ-ಕುಂಕುಮಕ್ಕೆಂದು ಹಣ ವಿತರಣೆ ಮಾಡುತ್ತಿರುವುದು ಈ ದೃಶ್ಯಗಳಲ್ಲಿ ಸ್ಪಷ್ಟವಾಗಿದೆ.  ಪಕ್ಷವೊಂದರ ಪರವಾಗಿ ಮತ ಹಾಕುವಂತೆ ಪ್ರೇರೇಪಿಸಲಾಗುತ್ತಿದೆ ಎನ್ನಲಾಗಿದೆ. ಭೂಪಸಂದ್ರ, ವೀರಾಪುರ, ಸಿದ್ದಾಪುರ ಗ್ರಾಮಗಳಲ್ಲಿ ಹಣ ಹಂಚಿಕೆ ಪ್ರಕ್ರಿಯೆ ನಡೆದಿದೆ ಎನ್ನಲಾಗುತ್ತಿರೋ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ದ್ವಿಚಕ್ರ ವಾಹನದಲ್ಲಿ ಹಣ ಸಾಗಾಟ ಮಾಡುತ್ತಿದ್ದ 7 ಲಕ್ಷ ರೂ.ಗಳನ್ನು ಫ್ಲೈಯಿಂಗ್ ಸ್ಕ್ವಾಡ್ ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡಿದೆ. ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮುತ್ತುರಾಯನಗರದ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಸುಜುಕಿ ಬೈಕ್‍ನಲ್ಲಿ ರಮೇಶ್ ಹಾಗೂ ಮಾಣಿಕ್‍ಚಂದ್ ಎಂಬುವವರು ಹಣ ಸಾಗಿಸುತ್ತಿದ್ದರು.

ಹೀಗೆ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಮೂರು ಪಕ್ಷಗಳೂ ಮತದಾರರ ಮನಗೆಲ್ಲಲ್ಲು ನಾನಾ ಕಸರತ್ತು ನಡೆಸುತ್ತಿರುವುದರ ಜೊತೆಗೆ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಝಣ ಝಣ ಕಾಂಚಾಣ ಸದ್ದು ಕೇಳಿ ಬರುತ್ತಿದೆ.  ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಬಹುತೇಕ ನಿರ್ಣಯವಾಗಿರುವುದರಿಂದ ಮೂರು ಪಕ್ಷಗಳು ಮಹಿಳೆಯರನ್ನು ಸೆಳೆಯಲು ನಾನಾ ಕಸರತ್ತು ನಡೆಸಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮಹಿಳಾ ಸಂಘಟನೆಗಳು, ಸ್ತ್ರೀ ಶಕ್ತಿ ಸಂಘಟನೆಗಳನ್ನು ಗುರಿಯಾಗಿಟ್ಟುಕೊಂಡು ಮತ ಸೆಳೆಯಲು ಮುಂದಾಗಿವೆ.

ಯಾವುದೇ ಚುನಾವಣೆಯಾದರೂ ಅಭ್ಯರ್ಥಿಯ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮಹಿಳಾ ಮತಗಳೇ ನಿರ್ಣಾಯಕವಾಗಿರುವುದರಿಂದ ಈ ಉಪಚುನಾವಣೆಯಲ್ಲಿ ಮಹಿಳಾ ಮತದಾರರಿಗೆ ಭಾರೀ ಬೇಡಿಕೆ ಬಂದಿದೆ. ಇನ್ನು ಚುನಾವಣಾ ಆಯೋಗದ ಕಣ್ಣು ತಪ್ಪಿಸಿ, ಸ್ತ್ರೀಶಕ್ತಿ ಸಂಘಟನೆಗಳ ಮುಖ್ಯಸ್ಥರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ.

ಇದರ ಜೊತೆಗೆ ಮೂರು ಪ್ರಮುಖ ಪಕ್ಷಗಳು ಮತದಾರರನ್ನು ಸೆಳೆಯಲು ಜಾತಿ ಲೆಕ್ಕಾಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿವೆ. ಕಾಂಗ್ರೆಸ್‍ನ ಜಯಚಂದ್ರ, ಜೆಡಿಎಸ್‍ನ ಅಮ್ಮಾಜಮ್ಮ ಮತ್ತು ಬಿಜೆಪಿಯ ರಾಜೇಶ್ ಗೌಡ ಕುಂಚಿಟಿಗ ಒಕ್ಕಲಿಗರಾಗಿದ್ದು ಚುನಾವಣೆಯಲ್ಲಿ ಗೆಲ್ಲಲು ಬೇರೆ ಸಮುದಾಯಗಳ ಮತಗಳು ಅತ್ಯಗತ್ಯವಾಗಿದೆ.

ವಿಶೇಷವಾಗಿ ಶಿರಾ ಪಟ್ಟಣದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ .ವೈ.ವಿಜಯೇಂದ್ರ- ಲಿಂಗಾಯತ, ಈಶ್ವರಪ್ಪ- ಕುರುಬ, ಹಿರಿಯೂರು ಶಾಸಕಿ ಪೂರ್ಣಿಮಾ-ಗೊಲ್ಲ ಸಮುದಾಯ ಹಾಗೂ ಒಕ್ಕಲಿಗ ಮುಖಂಡ ಡಿಸಿಎಂ ಅಶ್ವತ್ಥನಾರಾಯಣ ಸಮುದಾಯಗಳ ಮತಕ್ಕಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಅದಕ್ಕಿಂತ ಮುಖ್ಯವಾಗಿ, ಶಿರಾದಲ್ಲಿ ಸಾಕಷ್ಟು ಮತಗಳನ್ನು ಹೊಂದಿರುವ ಎಸ್ಸಿ ಎಡ ಸಮುದಾಯವನ್ನು ಪ್ರತಿನಿಧಿಸುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇದನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ.

ಕಾರಜೋಳ ಅವರು ಕಾಂಗ್ರೆಸ್ ಟಾರ್ಗೆಟ್ ಮಾಡಿ ಮತಯಾತನೆ ಮಾಡುತ್ತಿದ್ದಾರೆ. ಹಿಂದುಳಿದ ಸಮುದಾಯಗಳ ಮುಖಂಡ ರಘು ಕೌಟಿಲ್ಯ ಅವರು, ಮಡಿವಾಳ, ಉಪ್ಪಾರ, ಈಡಿಗ, ಬಲಜಿಗ ಹಾಗೂ ಕುರುಬ ಸಮುದಾಯಗಳ ಓಲೈಕೆಗೆ ಮುಂದಾಗಿದ್ದಾರೆ. ಕುರುಬ ಮುಖಂಡ ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ತಡವಾಗಿ ಪ್ರಚಾರ ಪ್ರಾರಂಭಿಸಿದ್ದಾರೆ.

ಜೆಡಿಎಸ್‍ನಲ್ಲಿ ನಿರ್ಧಿಷ್ಟ ಜಾತಿಗೆ ಸ್ಟಾರ್ ಪ್ರಚಾರಕರಿಲ್ಲ, ಪಾವಗಡ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಎಸ್ ಸಿ (ಎಡ) ಸಮುದಾಯಕ್ಕೆ ಸೇರಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್ ರಾಜಧ್ಯಕ್ಷ ಎಚ್,ಕೆ ಕುಮಾರಸ್ವಾಮಿ ಎಸ್ (ಬಲಗೈ) ಸಮುದಾಯಕ್ಕೆ ಸೇರಿದ್ದು ಪ್ರಚಾರದಲ್ಲಿ ಪಾಲ್ಗೊಂಡಿಲ್ಲ, ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ, ಪುತ್ರರಾದ ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಹಾಗೂ ಮೊಮ್ಮಕ್ಕಳಾದ ನಿಖಿಲ್ ಕುಮಾರ ಸ್ವಾಮಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ,
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮತ್ತೊಬ್ಬ ಒಕ್ಕಲಿಗ ಮುಖಂಡರಾಗಿದ್ದು, ಕಳ್ಳಂಬೆಳ್ಳ ಹೋಬಳಿಯಲ್ಲಿ ಉತ್ತಮ ಮತ ತಂದುಕೊಂಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆಗೆ ಸಮಾಜವಾದಿ ಪಕ್ಷ ಜೆಡಿಎಸ್ ಷರತ್ತು ರಹಿತ ಬೆಂಬಲ ಘೋಷಿಸಿದೆ.

ಆರ್ ಆರ್ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಮೂರು ರಾಜಕೀಯ ಪಕ್ಷಗಳಿಗೆ ನಿರ್ಣಾಯಕ. ಅದರಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿದೆ. ಉಪ ಚುನಾವಣೆಯ ಸೋಲು ಅಥವಾ ಗೆಲವು ನೇರವಾಗಿ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ ರಾಜಕೀಯದ ಹಲವು ವಿಪ್ಲವಗಳಿಗೆ ಮುನ್ನುಡಿಯಾಗಲಿದೆ. ಹೀಗಾಗಿಯೇ ಬಿ.ವೈ.ವಿಜಯೇಂದ್ರ ಅವರು ಶಿರಾ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಕೂಗು ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಮುಂದಿನ ಮುಖ್ಯಮಂತ್ರಿ ವಿಚಾರಗಳಿಗೆ ಈ ಚುನಾವಣೆ ಫಲಿತಾಂಶ ನಿರ್ಣಾಯಕವಾಗಲಿದೆ. ಉಪ ಚುನಾವಣೆಯ ಫಲಿತಾಂಶದಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲವಾದರೂ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಮಸ್ಯೆ ಆಗುವುದಿಲ್ಲ ಅಂತಿಲ್ಲ. ಹೀಗಾಗಿ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿದೆ.

ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಡಿ.ಟಿ. ಶ್ರೀನಿವಾಸ್ ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರಿಂದ ಪಕ್ಷ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.

ವಿಶೇಷ ಎಂದರೆ ಗೊಲ್ಲ ಸಮುದಾಯಕ್ಕೆ ಸೇರಿರುವ ಡಿ.ಟಿ.ಶ್ರೀನಿವಾಸ್ ಅವರು ಇದೇ ಕಾರಣದಿಂದ ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಜೊತೆಗೆ ಇದೀಗ ಪಕ್ಷದಿಂದ ಉಚ್ಛಾಟನೆ ಮಾಡುರುವುದರಿಂದ ಅದರ ಪರಿಣಾಮ ಶಿರಾ ಉಪಚನಾವಣೆ ಮೇಲೇ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮತ್ತೊಬ್ಬ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಾಲನೂರು ಎಸ್. ಲೇಪಾಕ್ಷ ಅವರನ್ನೂ ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ರಾಜಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಆದೇಶ ಮಾಡಿದ್ದಾರೆ. ಲೇಪಾಕ್ಷ ಅವರು ನೇರವಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿಲ್ಲವಾದರೂ ಸಿಎಂ ಯಡಿಯೂರಪ್ಪ ಅವರಿಗೆ ಅತ್ಯಾಪ್ತರಾಗಿದ್ದವರು. ಇದೀಗ ಅವರನ್ನೂ ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದು ಪರೋಕ್ಷವಾಗಿ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.