ಉಪಚುನಾವಣೆಯಲ್ಲಿ ಬಿಜೆಪಿಗೆ ತಲೆನೋವಾಗಿವೆ ಈ 3 ಕ್ಷೇತ್ರಗಳು..!

ಬೆಂಗಳೂರು,ನ.21- ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಮೂರು ಕ್ಷೇತ್ರಗಳು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ, ಬಳ್ಳಾರಿ ಜಿಲ್ಲೆಯ ಗೋಕಾಕ್ ಕ್ಷೇತ್ರಗಳಲ್ಲಿ ಬಿಜೆಪಿಯ ಭಿನ್ನಮತೀಯರು ಕಣದಲ್ಲೇ ಉಳಿಯಲು ತೀರ್ಮಾನಿಸಿರುವುದರಿಂದ ಅಧಿಕೃತ ಅಭ್ಯರ್ಥಿಗಳಿಗೆ ಕಠಿಣ ಸವಾಲು ಎದುರಾಗಿದೆ.

ನಾಮಪತ್ರ ಹಿಂಪಡೆಯಲು ಇಂದು ಕಡೆಯ ದಿನವಾದ ಹಿನ್ನೆಲೆಯಲ್ಲಿ ಮನವೊಲಿಸುವ ಕಸರತ್ತು ಕೊನೆ ಕ್ಷಣದವರೆಗೂ ನಡೆಯಿತು. ಆದರೆ ಯಾರೊಬ್ಬರೂ ಸಂಧಾನಕ್ಕೆ ಜಗ್ಗದೆ ನಾಮಪತ್ರ ವಾಪಸ್ ಪಡೆಯದೆ ಕಣದಲ್ಲಿ ಉಳಿದ ಕಾರಣ ಬಿಜೆಪಿ ಅಭ್ಯರ್ಥಿಗಳು ಗೆಲುವಿಗೆ ಕಠಿಣ ಪರಿಶ್ರಮ ಹಾಕಬೇಕಿದೆ.

ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ, ವಿಜಯನಗರದಲ್ಲಿ ಕವಿರಾಜ್ ಅರಸು ಹಾಗೂ ಗೋಕಾಕ್‍ನಲ್ಲಿ ಅಶೋಕ್ ಪೂಜಾರಿ ನಾಮಪತ್ರ ಹಿಂಪಡೆಯಲು ನಿರಾಕರಿಸಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದೆಂದು ಬಿಜೆಪಿ ಮುಖಂಡರು ಆಶ್ವಾಸನೆ ಕೊಟ್ಟರೂ ಸಹ ಯಾವ ಸಂಧಾನಕ್ಕೆ ಜಗದ ಶರತ್ ಬಚ್ಚೇಗೌಡ ಅವರನ್ನು ಖುದ್ದು ಕಂದಾಯ ಸಚಿವ ಆರ್.ಅಶೋಕ್ ಮನವೊಲಿಸುವ ಪ್ರಯತ್ನ ನಡೆಸಿದರು.

ಇಂದು ಮಧ್ಯಾಹ್ನ 3 ಗಂಟೆಯೊಳಗೆ ನಿಮ್ಮ ನಾಮಪತ್ರವನ್ನು ಹಿಂಪಡೆಯದಿದ್ದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಇದಾವುದಕ್ಕೂ ಬಗ್ಗದ ಅವರು ಕಾರ್ಯಕರ್ತರ ಒತ್ತಾಸೆಯಂತೆ ಸ್ಪರ್ಧೆ ಮಾಡಿದ್ದೇನೆ. ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಪಕ್ಷ ನನ್ನ ವಿರುದ್ದ ಏನೇ ಶಿಸ್ತು ಕ್ರಮ ಜರುಗಿಸಿದರೂ ಅದನ್ನು ಎದುರಿಸಲು ನಾನು ಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತ ವಿಜಯನಗರದಲ್ಲಿ ಕವಿರಾಜ್ ಅರಸ್ ಅವರನ್ನು ಸಚಿವ ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸಂಸದ ದೇವೇಂದ್ರಪ್ಪ ಮತ್ತಿತರರು ನಾಮಪತ್ರ ಹಿಂಪಡೆಯಲು ನಡೆಸಿದ ಕಸರತ್ತು ಫಲ ನೀಡಿಲ್ಲ. ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ದ ನಾನು ಸ್ಪರ್ಧೆ ಮಾಡಲು ಸಿದ್ದ ಎಂದು ಪಕ್ಷದ ಮುಖಂಡರಿಗೆ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ನನ್ನ ಜೊತೆ ಸಂಧಾನ ನಡೆಸುವ ಅಗತ್ಯವಿಲ್ಲ. ನನ್ನ ನಿರ್ಧಾರಕ್ಕೆ ಈಗಲೂ ಬದ್ದನಾಗಿದ್ದೇನೆ. ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಗೋಕಾಕ್‍ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಶೋಕ್ ಪೂಜಾರಿ ಅವರನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಸೇರಿದಂತೆ ಬೆಳಗಾವಿ ಜಿಲ್ಲಾ ಮುಖಂಡರು ಮನವೊಲಿಸಿದರೂ ಪೂಜಾರಿ ಮಾತ್ರ ಯಾವುದಕ್ಕೂ ಜಗ್ಗದೆ, ಕಣದಲ್ಲಿ ಉಳಿಯುತ್ತೇನೆಂದು ಹೇಳಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉಳಿದಂತೆ ಇತರೆ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅಂತಹ ಭಿನ್ನಮತ ಎದರುರಾಗದೆ ಇರುವುದು ತುಸು ನೆಮ್ಮದಿ ತಂದಿದೆ.

Sri Raghav

Admin