ಉಪಚುನಾವಣೆಯಲ್ಲಿ ಒಟ್ಟಾರೆ ಶೇ. 65ರಷ್ಟು ಮತದಾನ, ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ

Voting--01

ಬೆಂಗಳೂರು, ನ.3- ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಾಂಧವ್ಯಕ್ಕೆ ಸವಾಲಾಗಿ ರುವ, ಪ್ರತಿಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ನಡೆದ
ಮತದಾನ ಆರಂಭದಲ್ಲಿ ಮಂದಗತಿಯಿಂದ ಸಾಗಿದ್ದು, ನಂತರ ಚುರುಕುಗೊಂಡಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದೆ ಬಹುತೇಕ ಶಾಂತಿಯುತವಾಗಿತ್ತು.

ಮತದಾನ ಮುಕ್ತಾಯಗೊಂಡ ವೇಳೆಗೆ ಒಟ್ಟಾರೆ ಶೇಕಡಾ 65 ರಷ್ಟು ಮತದಾನವಾಗಿದೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ. 77.17 ರಾಶು ಮತದಾನವಾಗಿದೆ. ಇನ್ನುಳಿದಂತೆ ಬಳ್ಳಾರಿಯಲ್ಲಿ ಶೇ.63.85, ಮಂಡ್ಯದಲ್ಲಿ ಶೇ.53.93, ಶಿವಮೊಗ್ಗ ಶೇ.61.05, ಮತ್ತು ರಾಮನಗರದಲ್ಲಿ ಶೇ.71.88ರಷ್ಟು ಮತದಾನವಾಗಿದೆ.

ಕೆಲವೆಡೆ ಮತಯಂತ್ರಗಳ ಲೋಪ, ಮತದಾನ ವಿಳಂಬ, ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ನೀತಿ-ಸಂಹಿತೆ ಉಲ್ಲಂಘನೆಯಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನಕ್ಕೆ ಸಾರ್ವಜನಿಕರಿಂದ ಅಷ್ಟೊಂದು ಉತ್ಸಾಹ ಕಂಡುಬರಲಿಲ್ಲ. 10 ಗಂಟೆಯ ನಂತರ ಮತದಾನ ಅಲ್ಪ ಬಿರುಸುಗೊಂಡಿದ್ದು ಕಂಡುಬಂತು. ಸರದಿ ಸಾಲಿನಲ್ಲಿ ನಿಂತು ಮತದಾರರು ಎಲ್ಲೆಡೆ ತಮ್ಮ ಹಕ್ಕು ಚಲಾಯಿಸಿದರು. ಕೆಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ್ದರಿಂದ ಮತ ಚಲಾಯಿಸಲಾಗದೆ ವಾಪಸ್ ಹೋದ ಘಟನೆಗಳು ನಡೆದಿವೆ.

ಶಿವಮೊಗ್ಗದಲ್ಲಿ ಮತದಾನ ನೀರಸವಾಗಿದ್ದರೆ, ಬಳ್ಳಾರಿಯಲ್ಲಿ ಬಿರುಸಿನ ಮತದಾನ ನಡೆಯಿತು. ಮಂಡ್ಯದಲ್ಲಿ ಮಂದಗತಿಯಲ್ಲಿ ಮತದಾನ ಸಾಗಿತ್ತು. ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಆರಂಭದಿಂದಲೇ ಚುರುಕಿನಿಂದ ಸಾಗಿತ್ತು. 10 ಗಂಟೆಯವರೆಗೆ ಶೇ.10ರಷ್ಟು ಮತದಾನವಾಗಿದ್ದು, 12 ಗಂಟೆಯ ವೇಳೆಗೆ ಶೇ.25ರಷ್ಟು ಮತದಾನವಾಗಿತ್ತು.

ರಾಮನಗರ ವಿಧಾನಸಭಾ ಕ್ಷೇತ್ರದ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಹಿಂದೆ ಸರಿದಿದ್ದರಿಂದ ಮತಗಟ್ಟೆಗಳಿಗೆ ಬಿಜೆಪಿ ಏಜೆಂಟರುಗಳ ಪ್ರವೇಶಕ್ಕೆ ಕಾಂಗ್ರೆಸ್-ಜೆಡಿಎಸ್ ಏಜೆಂಟರ್‍ಗಳು ಅವಕಾಶ ನೀಡಲಿಲ್ಲ. ಕ್ಷೇತ್ರದ 277 ಮತಗಟ್ಟೆಗಳಲ್ಲಿ ಬಿಜೆಪಿ ಏಜೆಂಟರ್‍ಗಳು ಇಲ್ಲದೆ ಬಿಕೋ ಎನ್ನುತ್ತಿದ್ದವು. ಹಲವೆಡೆ ಗೊಂದಲದ ವಾತಾವರಣ ಉಂಟಾಗಿ ಮಾತಿನ ಚಕಮಕಿ ಕೂಡ ನಡೆಯಿತು. ರಾಮನಗರ ಕ್ಷೇತ್ರದ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ್ದರಿಂದ ಅವರು ಮತ ಚಲಾಯಿಸುವ ಅವಕಾಶದಿಂದ ವಂಚಿತರಾದರು.

ಜಮಖಂಡಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರ ಬಳಿ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ದೂರು ದಾಖಲಿಸಿಕೊಳ್ಳಲಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತಗಟ್ಟೆಯ ಹೆಚ್ಚುವರಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಕುರುಗೋಡು ಎಂಬಲ್ಲಿ ನಡೆದಿದೆ. ವೈ.ಎಂ.ಮಂಜುನಾಥ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಿನ್ನೆ ಮಸ್ಟರಿಂಗ್ ಕೇಂದ್ರದಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಕಳೆದ ರಾತ್ರಿ ಅವರು ಮನೆಯಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬಳ್ಳಾರಿ ಕ್ಷೇತ್ರದ ಬಹುತೇಕ ಕಡೆ ಮತದಾನ ಬಿರುಸಿನಿಂದ ಸಾಗಿದೆ. 2000ಕ್ಕೂ ಅಧಿಕ ಇರುವ ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರು ತಮ್ಮ ಸಹೋದರ ಶ್ರೀರಾಮುಲು ಜತೆಗೆ ಆಗಮಿಸಿ ಮತ ಚಲಾಯಿಸಿದರು. ಕ್ಷೇತ್ರದ ಹರಗಿಣದೋಣಿ ಗ್ರಾಮಸ್ಥರು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಹಾಕಿದ್ದರಲ್ಲದೆ, ಖಾಲಿ ಕೊಡಗಳನ್ನು ಹಿಡಿದುಕೊಂಡು ಪ್ರತಿಭಟನೆ ಕೂಡ ನಡೆಸಿದರು. ಅಧಿಕಾರಿಗಳು ಮತದಾನ ಮಾಡುವಂತೆ ಮಾಡಿದ ಮನವಿ ಕೂಡ ವಿಫಲವಾಯಿತು.

ಬಳ್ಳಾರಿಯ ಹೊಸಪೇಟೆಯ ವಾರ್ಡ್ ನಂ.74ರಲ್ಲಿ ಮತ ಚಲಾಯಿಸಿದ ಬಳಿಕ ನಾರಾಯಣಪ್ಪ (74) ಎಂಬವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮತಗಟ್ಟೆ 22ಕ್ಕೆ ಮತದಾನಕ್ಕೆ ಆಗಮಿಸಿದ ಅವರು ಮತದಾನದ ನಂತರ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರ ಹೆಸರು ಬೆಂಗಳೂರಿನ ಮತದಾರರ ಪಟ್ಟಿಯಲ್ಲಿರುವುದರಿಂದ ಉಪ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ದೊರಕಲಿಲ್ಲ.

ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ನೀರಸವಾಗಿತ್ತು. 10 ಗಂಟೆಯ ವೇಳೆಗೆ ಶೇಕಡಾ 8ರಷ್ಟು ಮತದಾನವಾಗಿತ್ತು. ಕೆಲ ಕಾಲ ವಿದ್ಯುನ್ಮಾನ ಮತಯಂತ್ರಗಳ ದೋಷದಿಂದ ಮತದಾನ ಸ್ಥಗಿತಗೊಂಡಿತ್ತು. ಸಚಿವ ಡಿ.ಸಿ.ತಮ್ಮಣ್ಣ ಅವರೊಂದಿಗೆ ಆಗಮಿಸಿದ ಮಾಜಿ ಸಚಿವ ಅಂಬರೀಶ್ ಅವರು ದೊಡ್ಡರಸಿನಕೆರೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಮೈತ್ರಿ ವಿರೋಧಿಸಿ ಮಳವಳ್ಳಿ ತಾಲೂಕಿನ ದೇವೀಪುರ ಮತಗಟ್ಟೆಗೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಬರಲಿಲ್ಲ. ಬಿಜೆಪಿ ಬಾವುಟ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆ ಮಾಡಿದ್ದು ಗಮನ ಸೆಳೆಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿರುಸಿನ ಮತದಾನ ನಡೆದಿದ್ದು, 10 ಗಂಟೆಯ ವೇಳೆಗೆ ಶೇಕಡಾ 15ರಷ್ಟು ಮತದಾನವಾಗಿತ್ತು. ಇಲ್ಲಿನ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಸಹೋದರ ವಿಜಯೇಂದ್ರ ತಮ್ಮ ತಂದೆ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಮತದಾನ ಮಾಡಿದರು. ಸೊರಬದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಮತ ಚಲಾಯಿಸಿದರು. ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಶಿವಮೊಗ್ಗದಲ್ಲಿ ಮತಚಲಾಯಿಸಿದರು. ಒಟ್ಟಾರೆ ಐದೂ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನವಾಗಿದ್ದು, ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.