ಬೈರತಿ ಬಸವರಾಜ್‍ಗೆ ಬೆಳ್ಳಿ ಕಿರೀಟ ಉಡುಗೊರೆ

ಕೆಆರ್‌ ಪುರ , ಡಿ.13 -ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್‍ಗೆ ಅವರ ಅಭಿಮಾನಿ ಹಾಗೂ ದೇವಸಂದ್ರ ಮುಖಂಡರಾದ ಪ್ರದೀಪ್ ಯಾದವ್ ಅವರು ಒಂದು ಕೆ.ಜಿ.ಬೆಳ್ಳಿ ಕಿರೀಟವನ್ನು ಉಡುಗೊರೆಯಾಗಿ ನೀಡಿದರು. ಪ್ರದೀಪ್ ಯಾದವ್ ಅವರಿಗೆ ಇತ್ತೀಚೆಗಷ್ಟೇ ಶಸ್ತ್ರ ಚಕಿತ್ಸೆ ಯಾಗಿದ್ದರೂ ಸಹ ತಮ್ಮ ನೆಚ್ಚಿನ ನಾಯಕರಾದ ಬೈರತಿ ಬಸವರಾಜ ಅವರನ್ನು ಅಭಿನಂದಿಸಲೇ ಬೇಕೆಂದು ಭೈರತಿಯಲ್ಲಿರುವ ಅವರ ಮನೆಗೆ ತೆರಳಿ ಕಿರೀಟ ನೀಡಿ ಶುಭ ಕೋರಿದರು.

ಕೆಆರ್‍ಪುರ ಕ್ಷೇತ್ರದ ಅಭಿವೃದ್ಧಿ ಯಲ್ಲಿ ಬೈರತಿ ಬಸವರಾಜ ಅವರ ಕೊಡುಗೆ ಅಪಾರ.ಅವರು ಮಂತ್ರಿಗಳಾದ ಮೇಲಂತೂ ಇನ್ನಷ್ಟು ಅಭಿವೃದ್ಧಿ ಕಾಣುತ್ತೇವೆ. ರಾಜ್ಯ ಸರ್ಕಾರ ಅವರಿಗೆ ಉನ್ನತ ಮಂತ್ರಿ ಸ್ಥಾನ ನೀಡಿ ಬೆಂಗಳೂರು ಅಭಿವೃದ್ಧಿಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಪ್ರದೀಪ್‍ಯಾದವ್ ಮನವಿ ಮಾಡಿದರು.

ಶಾಸಕ ಬೈರತಿ ಬಸವರಾಜ ಮಾತನಾಡಿ, ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅವರ ಭರವಸೆ ಈಡೇರಿಸುವ ಕೆಲಸದಲ್ಲಿ ಸದಾ ನಿರತನಾಗುತ್ತೇನೆ ಎಂದು ಹೇಳಿದರು. ರಾಜ್ಯದಲ್ಲಿ ಮಂತ್ರಿ ಯಾಗಿ ಯಾವುದೇ ಸ್ಥಾನ ನೀಡಿದರೂ ನಿಭಾಯಿಸುತ್ತೇನೆ. ಕೆಆರ್‍ಪುರ ಕ್ಷೇತ್ರದಲ್ಲಿ ಮೂಲ ಬಿಜೆಪಿಗರು ಹಾಗೂ ನನ್ನ ಅಭಿಮಾನಿಗಳು ಮುಖಂಡರನ್ನು ಒಗ್ಗೂಡಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.

ಪ್ರದೀಪ್ ಯಾದವ್ ಅವರಿಗೆ ಶಸ್ತ್ರ ಚಿಕಿತ್ಸೆಯಾಗಿದ್ದರೂ ಸಹ ನನಗೆ ಶುಭ ಕೋರಲು ಆಗಮಿಸಿದ್ದಾರೆ ಅವರಿಗೆ ನನ್ನ ಧನ್ಯವಾದ ತಿಳಿಸಿ ಮುಂದಿನ ದಿನಗಳಲ್ಲಿ ಕೆಆರ್‍ಪುರ ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದರು. ಚಿದಾನಂದ, ಮುನಿಯಪ್ಪ, ಲಿಂಗರಾಜು, ಪ್ರಮೀಳ, ಸಂಜು ಮತ್ತಿತರರಿದ್ದರು.