ಬೆಂಗಳೂರು,ಫೆ.15- ಯಾವ ಚಾಲಕರಿಗೂ ಅನ್ಯಾಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಇಂದಿಲ್ಲಿ ಭರವಸೆ ನೀಡಿದರು. ರ್ಯಾಪಿಡ್ ಬೈಕ್‍ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ತಮ್ಮ ನಿವಾಸಕ್ಕೆ ಮುತ್ತಿಗೆ ಹಾಕಿದ ಕ್ಯಾಬ್ ಚಾಲಕರಿಗೆ ಸಚಿವರು ಈ ಭರವಸೆ ನೀಡಿದರು.
ರ್ಯಾಪಿಡ್ ಬೈಕ್‍ಟ್ಯಾಕ್ಸಿ ಸೇವೆಯಿಂದ ಕ್ಯಾಬ್ ಚಾಲಕರಿಗೆ ಅನ್ಯಾಯವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಬರುವ ಸೋಮವಾರ ಎಲ್ಲ ಸಂಘಟನೆಗಳ ಅಧ್ಯಕ್ಷರು ಮತ್ತು ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ಯಾವ ಚಾಲಕರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ನಿರುದ್ಯೋಗ ಸಮಸ್ಯೆಗಾಗಿ ಸಾವಿರಾರು ಮಂದಿ ಕ್ಯಾಬ್‍ಗಳನ್ನೇ ನಂಬಿಕೊಂಡು ಚಾಲಕರಾಗಿ ದುಡಿಮೆ ಮಾಡುತ್ತಿದ್ದಾರೆ. ಅಂಥವರಿಗೆ ಕೆಲ ಸೇವೆಗಳಿಂದ ಅನ್ಯಾಯವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾನೂನುಬಾಹಿರವಾಗಿ ಸಂಚರಿಸುವ ವಾಹನಗಳ ಸೇವೆಗಳ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಎಂದರು.
ಎಲೆಕ್ಟ್ರಿಕ್ ಬೈಕ್ ಸೇವೆ ಬಗ್ಗೆಯೂ ಕೂಲಂಕುಷವಾಗಿ ಪರಿಶೀಲಿಸುತ್ತೇನೆ. ನಾನು ಸಾರಿಗೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಚಾಲಕರ ಪರವಾಗಿ ಹಲವಾರು ಕ್ರಮ ಕೈಗೊಂಡಿದ್ದೇನೆ. ನಿಮ್ಮ ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದಾಗಿ ಹೇಳಿದರು.
ವಕೀಲ ಅಮೃತೇಶ್ ಮಾತನಾಡಿ, ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗುತ್ತಿದೆ. ಪೋಲೀಸ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ. ಅನಧಿಕೃತ ವೈಟ್‍ಬೋರ್ಡ್ ಟ್ಯಾಕ್ಸಿ ಹಾವಳಿಯಿಂದ ಈ ಸಮಸ್ಯೆಯಾಗಿದೆ. ಇದರಿಂದ ಸರ್ಕಾರಕ್ಕೂ ನಷ್ಟವಾಗುತ್ತಿದೆ. ಚಾಲಕರ ಈ ಸಮಸ್ಯೆಗೆ ಒಂದು ವಾರದೊಳಗೆ ಪರಿಹಾರ ದೊರಕಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಅಲ್ಲಿಯವರೆಗೂ ಕಾದು ನೋಡುತ್ತೇವೆ ಎಂದರು.
ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತ್ ಟ್ರಾನ್ಸ್‍ಪೋರ್ಟ್ ಅಸೋಸಿಯೇಷನ್‍ನ ಕ್ಯಾಬ್ ಚಾಲಕರು ಇಂದು ಬೆಳಗ್ಗೆ ತಮ್ಮ ನೂರಾರು ಕ್ಯಾಬ್‍ಗಳನ್ನು ಸಾರಿಗೆ ಸಚಿವರ ಮನೆ ಮುಂದೆ ನಿಲ್ಲಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಪೋಲೀಸರು ಕ್ಯಾಬ್‍ಗಳನ್ನು ತೆರವುಗೊಳಿಸುವಂತೆ ಸೂಚಿಸಿದರು. ಸಾರಿಗೆ ಸಚಿವರು ಸ್ಥಳಕ್ಕೆ ಆಗಮಿಸಿ ತಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಕ್ಯಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಚಿವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
